ಹುಬ್ಬಳ್ಳಿ: ಕಿಲ್ಲರ್ ಕೊರೊನಾ ವೈರಸ್ನಿಂದ ಬಚಾವ್ ಆಗಬೇಕು ಎಂದುಕೊಂಡಿದ್ದ ಜನರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕೋವಿಡ್ ಒಂದನೇ ಅಲೆ, 2ನೇ ಅಲೆಯಿಂದ ಜೀವನ ಕಾಪಾಡಿಕೊಂಡು ನಿಟ್ಟುಸಿರು ಬಿಡಬೇಕು ಎಂದಿದ್ದವರಿಗೆ ಈಗ ಬ್ಲ್ಯಾಕ್ ಫಂಗಸ್ ಕಾಟ ಪ್ರಾರಂಭವಾಗಿದೆ.
ಜಿಲ್ಲೆಯಲ್ಲಿ ಕೋವಿಡ್ ರೋಗಿಗಳು ಬ್ಲ್ಯಾಕ್ ಫಂಗಸ್ನಿಂದ ಬಳಲುತ್ತಿದ್ದು, ಈಗಾಗಲೇ 9 ಜನರಿಗೆ ಹುಬ್ಬಳ್ಳಿಯ ಕಿಮ್ಸ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ಕೊರೊನಾ ಸೋಂಕಿನಿಂದ ಗುಣಮುಖರಾಗಿರುವ ರೋಗಿಗಳಲ್ಲಿಯೇ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ಳುತ್ತಿದೆ. ಈ ರೋಗದ ಕುರಿತು ಕಿಮ್ಸ್ ನ ಇ.ಎನ್.ಟಿ ವಿಭಾಗದ ಮುಖ್ಯಸ್ಥ ಡಾ. ರವೀಂದ್ರ ಗದಗ ಮಾಹಿತಿ ನೀಡಿದ್ದಾರೆ.
ಅರ್ಧ ತಲೆ ನೋವಿನಿಂದ ಕಾಣಿಸಿಕೊಳ್ಳುವ ರೋಗ ಹೆಚ್ಚಾಗಿ ಮಧುಮೇಹ ಇರುವ ಜನರಲ್ಲಿಯೇ ಪತ್ತೆಯಾಗುತ್ತಿದೆ. ಮೊದಲಿನಿಂದಲೂ ಇದ್ದ ಈ ರೋಗ, ಇದೀಗ ಧಿಡೀರ್ ಕಾಣಿಸಿಕೊಂಡಿದೆ. ಅಲ್ಲದೇ ಕೊರೊನಾ ವಿರುದ್ಧ ಹೋರಾಟ ನಡೆಸಿ ಮನೆಯತ್ತ ಮುಖ ಮಾಡಿರುವ ಜನರಲ್ಲಿ ಬ್ಲ್ಯಾಕ್ ಫಂಗಸ್ ಕಾಟ ಮತ್ತಷ್ಟು ಬೇಸರ ಮೂಡಿಸಿದೆ. ಇನ್ನು ಕೋವಿಡ್ ನಿಯಂತ್ರಣದ ಜೊತೆಗೆ ಬ್ಲ್ಯಾಕ್ ಫಂಗಸ್ ರೋಗಕ್ಕೂ ಚಿಕಿತ್ಸೆ ನೀಡಲು ಕಿಮ್ಸ್ ಸಿದ್ಧವಾಗಿದೆ.
ಒಟ್ಟಿನಲ್ಲಿ ಪ್ರಸ್ತುತ ದಿನಮಾನಗಳಲ್ಲಿ ಜೀವನ ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಒಂದಿಲ್ಲೊಂದು ರೀತಿಯ ರೋಗಗಳು ಮನುಕುಲಕ್ಕೆ ಮಾರಕವಾಗಿದ್ದು, ಜನರು ಆರೋಗ್ಯದ ಬಗ್ಗೆ ಕ್ಷಣ ಕ್ಷಣಕ್ಕೂ ಹೆಚ್ಚಿನ ಕಾಳಜಿ ವಹಿಸಬೇಕಿದೆ.
ಓದಿ: ರಾಜ್ಯದಲ್ಲಿ ತೌಕ್ತೆ ಅಬ್ಬರ ಏನೆಲ್ಲಾ ಹಾನಿ... ವಿಪತ್ತು ನಿರ್ವಹಣಾ ಸಂಸ್ಥೆ ವರದಿ ಇಲ್ಲಿದೆ