ಹುಬ್ಬಳ್ಳಿ: ಅವಳಿ ನಗರದ ಹೋಟೆಲ್ ಹಾಗೂ ವಿವಿಧ ತಿಂಡಿ ತಿನಿಸು ತಯಾರಿಕಾ ಘಟಕಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಜಾರ್ಖಂಡ್ ಮೂಲದ 69 ಕಾರ್ಮಿಕರಿಗೆ ಜಿಲ್ಲಾಡಳಿತದಿಂದ ಬಸ್ ವ್ಯವಸ್ಥೆ ಕಲ್ಪಿಸಿ ಇಂದು ಬೆಂಗಳೂರಿಗೆ ಕಳುಹಿಸಿಕೊಡಲಾಯಿತು.
ವಲಸೆ ಕಾರ್ಮಿಕರನ್ನು ಉಚಿತವಾಗಿ ಅವರವರ ರಾಜ್ಯಗಳಿಗೆ ಕಳುಹಿಸಿಕೊಡಲು ರಾಜ್ಯ ಸರ್ಕಾರದಿಂದ ವ್ಯವಸ್ಥೆ ಕಲ್ಪಿಸಲಾಗಿದ್ದು, ಹುಬ್ಬಳ್ಳಿಯಿಂದ ಬೆಂಗಳೂರಿಗೆ ತಲುಪುವ ಅವರನ್ನು ಅಲ್ಲಿಂದ ವಿಶೇಷ ಶ್ರಮಿಕ್ ಎಕ್ಸ್ಪ್ರೆಸ್ ರೈಲು ಜಾರ್ಖಂಡ್‍ಗೆ ಒಯ್ಯಲಿದೆ.
ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಬೆಳಗಿನ ಉಪಹಾರ ನೀಡಿ, ಮಾಸ್ಕ್ ಹಾಗೂ ಸ್ಯಾನಿಟೈಜರ್ ವಿತರಿಸಲಾಗಿದೆ. ಹೊರಡುವ ಮೊದಲೇ ಎಲ್ಲರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಪ್ರತಿ ಬಸ್‍ನಲ್ಲಿ 23ರಿಂದ 24 ಜನರಂತೆ ಒಟ್ಟು 3 ವಾಯುವ್ಯ ಕರ್ನಾಟಕ ಸಾರಿಗೆ ಬಸ್‍ಗಳಲ್ಲಿ ಸಾಮಾಜಿಕ ಅಂತರ ಪಾಲನೆಯೊಂದಿಗೆ ಕೂರಿಸಿ ಕಳುಹಿಸಿಕೊಡಲಾಗಿದೆ. ಮಧ್ಯಾಹ್ನದ ಊಟ ಹಾಗೂ ನೀರಿನ ವ್ಯವಸ್ಥೆ ಕೂಡ ಮಾಡಲಾಗಿದೆ.
ಪ್ರತಿ ಬಸ್‍ನಲ್ಲಿ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದ್ದು, ಇವರು ಪ್ರಯಾಣೀಕರನ್ನು ಬೆಂಗಳೂರಿನಿಂದ ಜಾರ್ಖಂಡ್‍ಗೆ ಸುರಕ್ಷಿತವಾಗಿ ಕಳುಹಿಸುವ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಸಮಾಜ ಕಲ್ಯಾಣ ಜಂಟಿ ನಿರ್ದೇಶಕ ಎನ್.ಆರ್.ಪುರುಷೋತ್ತಮ್ ತಿಳಿಸಿದರು.