ಹುಬ್ಬಳ್ಳಿ: ಇಲ್ಲಿನ ಬಾಲಾಜಿನಗರದ ನಿವೃತ್ತ ನೌಕರರೊಬ್ಬರಿಗೆ ವಂಚಕರು, ನಿಮ್ಮ ಸಿಮ್ಕಾರ್ಡ್ ದಾಖಲೆಗಳ ಪರಿಶೀಲನೆ ಮಾಡಬೇಕು ಎಂದು ನಂಬಿಸಿ 5 ಲಕ್ಷ ರೂಪಾಯಿಗೂ ಹೆಚ್ಚು ಹಣ ಲೂಟಿ ಹೊಡೆದಿದ್ದಾರೆ.
ಪ್ರಕರಣದ ವಿವರ
ಬಿಕಾಶಚಂದ್ರ ಎಂಬ ನಿವೃತ್ತ ನೌಕರರ ಮೊಬೈಲ್ ಸಂಖ್ಯೆಗೆ ಅಪರಿಚಿತರು ಕರೆ ಮಾಡಿ, ಸಿಮ್ಕಾರ್ಡ್ ವೆರಿಫಿಕೇಶನ್ ಪೆಂಡಿಂಗ್ ಇದೆ. ಕಸ್ಟಮರ್ ಕೇರ್ ಸರ್ವಿಸ್ ಸಂಖ್ಯೆಗೆ ಕರೆ ಮಾಡಿ, ಇಲ್ಲವಾದರೆ 24 ಗಂಟೆಯೊಳಗೆ ಮೊಬೈಲ್ ಸಂಖ್ಯೆ ಬ್ಲಾಕ್ ಮಾಡುತ್ತೇವೆಂದು ಹೇಳಿದ್ದಾರೆ. ನಂತರ ಡಾಕ್ಯುಮೆಂಟ್ ವೆರಿಫಿಕೇಶನ್ ಮಾಡುತ್ತೇವೆಂದು ಹೇಳಿ, ದಂಪತಿಯ ಬ್ಯಾಂಕ್‌ನ ಖಾತೆಯ ಗೌಪ್ಯ ಮಾಹಿತಿಯನ್ನು ಏನಿಡೆಸ್ಕ್ ಎಂಬ ಅಪ್ಲಿಕೇಶನ್ ಮೂಲಕ ಪಡೆದರು. ಬಳಿಕ ದಂಪತಿಯ ಜಂಟಿ ಖಾತೆಯಲ್ಲಿ ಹಣವಿದ್ದರೆ ಸಮಸ್ಯೆಯಾಗುತ್ತದೆ. ಆದ್ದರಿಂದ ಅದರಲ್ಲಿರುವ ಹಣವನ್ನು ನಿಮ್ಮ ಪತ್ನಿ ಖಾತೆಗೆ ಹಾಕಿ ಎಂದು ನಯವಾದ ಮಾತಿನಿಂದ, 5.20 ಲಕ್ಷ ರೂಪಾಯಿ ಹಣವನ್ನು ಪತ್ನಿಯ ಖಾತೆಗೆ ದಂಪತಿಯಿಂದಲೇ ವರ್ಗಾವಣೆ ಮಾಡಿಸಿದ್ದಾರೆ.
ಬಳಿಕ ಬಿಕಾಶಚಂದ್ರರ ಪತ್ನಿಯ ಖಾತೆಯಿಂದ ಹಂತ ಹಂತವಾಗಿ 50 ಸಾವಿರ ರೂ.ಗಳಂತೆ ಹತ್ತು ಬಾರಿ ಮತ್ತು 20 ಸಾವಿರ ರೂ. ಅನ್ನು ಅಮೆಜಾನ್ನಲ್ಲಿ ಆನ್‌ಲೈನ್ ಖರೀದಿಗೆ ಉಪಯೋಗಿಸಿಕೊಂಡು ಮೋಸಗೊಳಿಸಿದ್ದಾರೆ.
ಇದೀಗ ಈ ಕುರಿತು ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.