ಧಾರವಾಡ: ದಿನೇ ದಿನೆ ನವಲಗುಂದ ತಾಲೂಕಿನ ಮೊರಬದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಕೊರೊನಾ ನಿಯಂತ್ರಿಸುವುದು ತಾಲೂಕಾಡಳಿತಕ್ಕೆ ಇದೀಗ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಲಾಕ್‌ಡೌನ್ ಸಡಿಲಿಕೆಯಿಂದಾಗಿ ಜನರಿಗೆ ಕೊರೊನಾ ಸೋಂಕು ಗೊತ್ತಿಲ್ಲದಂತೆ ಹಬ್ಬುತ್ತಿದೆ. ದಿನಗಳು ಉರುಳಿದಂತೆ ಸೋಂಕಿತರ ಸಂಖ್ಯೆಯೂ ಹೆಚ್ಚುತ್ತಿದ್ದು, ಆದಷ್ಟು ಬೇಗ ತಾಲೂಕಾಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ.
ತಾಲೂಕಿನ ಬಹು ಭಾಗಗಳಲ್ಲಿ ಬೇರೆ ರಾಜ್ಯಗಳಿಂದ ಆಗಮಿಸಿದ ಜನರಿಂದಲೇ ಕೊರೊನಾ ಹಬ್ಬುತ್ತಿರುವುದು ಒಂದೆಡೆಯಾದರೆ, ಸಾಮಾನ್ಯ ಕಾಯಿಲೆಗಳಿಂದ ಕೊರೊನಾ ಕಾಣಿಸಿಕೊಳ್ಳಲಾರಂಭಿಸಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಗ್ರಾಮವನ್ನು ಹತೋಟಿಗೆ ತೆಗೆದುಕೊಳ್ಳುವುದು ತುಂಬಾ ಕಷ್ಟಕರವಾಗಬಹುದು.
ಮೊರಬ ಗ್ರಾಮದಲ್ಲಿ ಈಗಾಗಲೇ 41 ಪ್ರಕರಣಗಳು ಕಂಡು ಬಂದಿವೆ. ಇದೇ ಗ್ರಾಮದಲ್ಲಿ ಓರ್ವ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದಾನೆ. ಅಣ್ಣಿಗೇರಿಯಲ್ಲಿ 5 ಪ್ರಕರಣ, ಸಾಸ್ವಿಹಳ್ಳಿ-2, ಕೊಂಡಿಕೊಪ್ಪ, ಮಣಕವಾಡ ಗ್ರಾಮಗಳಲ್ಲಿ ತಲಾ ಒಂದು, ನವಲಗುಂದ ತಾಲೂಕಿನ ಗುಡಿಸಾಗರ ಗ್ರಾಮದಲ್ಲಿ ಒಂದು ಹೀಗೆ ಸೋಂಕು ಹಬ್ಬುತ್ತಲೇ ಇದೆ.
ಮೊರಬ ಗ್ರಾಮಕ್ಕೆ ಗ್ರಾಮವೇ ಸೀಲ್ ಡೌನ್ ಆಗಿದೆ. ಆದರೂ ಜನರು ಮನೆಯಿಂದ ಹೊರ ಬರುವುದು ತಪ್ಪುತ್ತಿಲ್ಲ. ರಾತ್ರಿ ವೇಳೆ ಬೇಕಾಬಿಟ್ಟಿಯಾಗಿ ಜನ ಅಡ್ಡಾಡುತ್ತಿದ್ದಾರೆ. ಹೀಗಾಗಿ ವಿನಾ ಕಾರಣ ಮನೆಯಿಂದ ಹೊರ ಬರಬೇಡಿ ಎಂದು ಎಷ್ಟೇ ಮನವಿ ಮಾಡಿಕೊಂಡರೂ ಪ್ರಯೋಜನವಾಗುತ್ತಿಲ್ಲ. ಒಟ್ಟಿನಲ್ಲಿ ಮೊರಬ ಕೊರೊನಾ ಹಾಟ್‌ಸ್ಪಾಟ್ ಆಗಿದ್ದು, ಇದನ್ನು ತಡೆಯಬೇಕೆಂದರೆ ಜನತೆಯ ಸಹಕಾರ ಅಗತ್ಯವಾಗಿದೆ. ಜತೆಗೆ ತಾಲೂಕಾಡಳಿತ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲು ಮುಂದಾಗಬೇಕಿದೆ.
ಗ್ರಾಮಸ್ಥರಿಗೆ ತರಕಾರಿ ಮತ್ತು ದಿನಸಿ ಕೊಳ್ಳಲು ಅಂಗಡಿಗಳನ್ನು ನಿಯೋಜನೆ ಮಾಡಲಾಗಿದೆ. 50 ವರ್ಷಕ್ಕಿಂತ ಮೇಲ್ಪಟ್ಟವರು ಮನೆಯಲ್ಲಿ ಇರಬೇಕು. ಮನೆಯಲ್ಲಿ ಒಬ್ಬರು ಮಾತ್ರ ತಮ್ಮ ಹೊಲಗಳಿಗೆ ಹೋಗಬಹುದು. ಮಾಸ್ಕ್ ಮತ್ತು ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಬೇಕು ಎಂದು ತಹಶೀಲ್ದಾರ್ ನವೀನ ಹುಲ್ಲೂರು ಮನವಿ ಮಾಡಿದ್ದಾರೆ.