ಹುಬ್ಬಳ್ಳಿ: ನರೇಗಾ ಯೋಜನೆಯಡಿ ಉದ್ಯೋಗ ನೀಡುವಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಸಂತಸ ವ್ಯಕ್ತಪಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಗಾ ಯೋಜನೆಯಡಿ 1,861 ಕೋಟಿ ಹಣ ಬಂದಿದೆ. ಹಿಂದಿನ ಸರ್ಕಾರದಲ್ಲಿದ್ದ ಬಾಕಿ ಹಣ ಕೊಟ್ಟು, ಸರ್ಕಾರದ ಬಳಿ 1000 ಕೋಟಿ ಉಳಿದಿದೆ. ಇನ್ನು ಅಂತರ್ಜಲ ಚೇತನ ಕಾರ್ಯಕ್ರಮ ಎಲ್ಲಾ ಜಿಲ್ಲೆಗಳಲ್ಲಿ ಆರಂಭವಾಗಲಿದೆ. ಗ್ರಾಮ ಪಂಚಾಯಿತಿಗಳಿಗೆ ಆಡಳಿತ ಸಮಿತಿ ನೇಮಕ ಮಾಡುವ ನಿಟ್ಟಿನಲ್ಲಿ ಚರ್ಚೆಯಾಗಿದೆ. ಕ್ಯಾಬಿನೆಟ್ನಲ್ಲಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಮಾಧ್ಯಮ ಪ್ರತಿನಿಧಿ ಕೇಳಿದ 'ಮುಖ್ಯಮಂತ್ರಿ ಬದಲಾವಣೆ ವಿಚಾರ'ದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಬದಲಾವಣೆಯೇ ಇಲ್ಲ. ಈ ವಿಚಾರವನ್ನು ಯಾರೋ ಮದ್ಯಪಾನ ಮಾಡಿದವರು ಮಾತನಾಡುತ್ತಾರೆ ಎಂದು ವ್ಯಂಗ್ಯವಾಡಿದರು.