ಧಾರವಾಡ: ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಎಂಬ ಮಾತಿದೆ. ಆದರೆ, ಕುಟುಂಬ ಕಲಹದಿಂದ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಬಂದಿದ್ದ 17 ದಂಪತಿಗಳು ಇಂದು ಮತ್ತೆ ಹೊಸ ಜೀವನ ಆರಂಭಿಸಿದ್ದಾರೆ. ಧಾರವಾಡದಲ್ಲಿ ನಡೆದ ಲೋಕ್ ಅದಾಲತ್ ದಾಂಪತ್ಯವನ್ನು ಗಟ್ಟಿಗೊಳಿಸಿದೆ.
ಮದುವೆಯಾಗಿ, ಮಕ್ಕಳಾದವರೂ ಕೂಡ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಗಂಡ ಮತ್ತ ಹೆಂಡತಿ ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದರು. ಇಂತವರಿಗೆ ನ್ಯಾಯಾಧೀಶರಾದ ಕೆ.ಶಾಂತಿ ಹಾಗೂ ನಾಗಶ್ರೀ ರಾಜಿ ಸಂಧಾನದ ಮೂಲಕ ಆ ಜೋಡಿಗಳು ಮತ್ತೆ ತಮ್ಮ ಜೀವನದಲ್ಲಿ ಹೊಂದಾಣಿಕೆಯಾಗುವಂತೆ ಮಾಡಿದರು.
ಮದುವೆಯಾಗಿ ಕೆಲ ವರ್ಷವಷ್ಟೇ ಕಳೆದಿದ್ದ ಜೋಡಿಗಳು ಲೋಕ್ ಅದಾಲತ್ ಮೂಲಕ ಮತ್ತೆ ಒಂದಾದ ನಂತರ ಜೊತೆಯಾಗಿ ಸಂತಸ ವ್ಯಕ್ತಪಡಿಸಿದರು. ತಮ್ಮ ಮಕ್ಕಳೊಂದಿಗೆ ನ್ಯಾಯಾಲಯಕ್ಕೆ ಬಂದಿದ್ದ ಪೋಷಕರಿಗೆ ಮುಖ್ಯ ನ್ಯಾಯಾಧೀಶೆ ಕೆ.ಶಾಂತಿ ಅವರು ಚಾಕೋಲೇಟ್ ನೀಡಿ ಶುಭ ಹಾರೈಸಿದರು.
ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿಯನ್ನು ಕರೆದು ನ್ಯಾಯಾಧೀಶರು ದಾಂಪತ್ಯದ ತಿಳಿವಳಿಕೆ ಹೇಳಿದ್ದರು. ರಾಜಿ ಸಂಧಾನದ ನಂತರ ಹೆಂಡತಿಗೆ ಒಂದು ವಾರದ ಮಟ್ಟಿಗೆ ಗಂಡನ ಮನೆಗೆ ಹೋಗಲು ಸೂಚಿಸಲಾಗಿತ್ತು. ಗಂಡನ ಮನೆಯಲ್ಲಿ ಯಾವುದೇ ಕಿರುಕುಳ ಹಾಗೂ ಮೊದಲಿನ ವಾತಾವರಣ ಇಲ್ಲದ್ದರಿಂದ ವಿಚ್ಛೇದನ ಕೋರಿದ್ದ ಮಹಿಳೆಯರು ಗಂಡನ ಮನೆಯಲ್ಲಿ ಈಗ ಎಲ್ಲವೂ ಸರಿ ಇದೆ. ನಾವು ಹೊಂದಿಕೊಂಡು ಜೀವನ ನಡೆಸುತ್ತೇವೆ ಎಂದು ನ್ಯಾಯಾಧೀಶರ ಮುಂದೆ ಪ್ರಸ್ತಾಪ ಮಾಡಿದ್ದು ಕಂಡು ಬಂತು.
ಲೋಕ್ ಅದಾಲತ್ನಲ್ಲಿ ನ್ಯಾಯಾಧೀಶೆ ನಾಗಶ್ರೀ ಮಾತನಾಡಿ, ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದ 32 ಜೋಡಿ ಪೈಕಿ ಇದೀಗ 17 ಜೋಡಿಗಳನ್ನು ಲೋಕ್ ಅದಾಲತ್ ಮೂಲಕ ಮತ್ತೆ ಒಂದು ಮಾಡಲಾಗಿದೆ. ವಿಚ್ಛೇದನ ಅರ್ಜಿ ಸಲ್ಲಿಕೆಯಾದ ನಂತರ ದಂಪತಿ ಮತ್ತು ಅವರ ಕುಟುಂಬದವರನ್ನು ಕರೆಸಿ ಮೂರ್ನಾಲ್ಕು ಸುತ್ತು ಮಾತುಕತೆ ನಡೆಸಿದ್ದೆವು.
ದಾಂಪತ್ಯದ ನಡುವೆ ಮೂಡಿದ ತೊಡಕುಗಳ ಬಗ್ಗೆ ಸಮಾಲೋಚನೆಯೂ ನಡೆಸಿದ್ದೆವು. ಈಗ ಅವರೆಲ್ಲರೂ ಚೆನ್ನಾಗಿದ್ದಾರೆ. ನಾವು ಮತ್ತೆ ಒಂದಾಗಾದೆ ಇದ್ದರೆ ಜೀವನ ಕಷ್ಟಕರವಾಗುತ್ತಿತ್ತು ಎಂಬ ಅನುಭವ ಕೂಡ ಆ ದಂಪತಿಗಳಿಗೆ ಆಗಿದೆ ಎಂದು ತಿಳಿದರು.
ಇದನ್ನೂ ಓದಿ: ರಾಮನಗರವನ್ನು ಮೀರಿಸುತ್ತಿದೆ ಗುಮ್ಮಟನಗರಿಯಲ್ಲಿನ ರೇಷ್ಮೆ ನೂಲು ಉತ್ಪಾದನಾ ಘಟಕ