ಧಾರವಾಡ: ಜಿಲ್ಲೆಯಾದ್ಯಂತ ಕೋವಿಡ್-19 ಕೊರೊನಾ ಸೋಂಕು ಹರಡದಂತೆ ಸಾರ್ವಜನಿಕರ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಏಪ್ರಿಲ್ 01 ರಿಂದ 14 ರವರೆಗೆ ಸಿ.ಆರ್.ಪಿ.ಸಿ 1973 ರ ಕಲಂ 144 ಅನ್ವಯ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ನಿಷೇಧಾಜ್ಞೆ ಅವಧಿಯನ್ನು ವಿಸ್ತರಿಸಿ ಆದೇಶ
ಹೊರಡಿಸಿದ್ದಾರೆ.
ಜಿಲ್ಲೆಯಾದ್ಯಂತ ಮೆರವಣಿಗೆ, ಸಭೆ, ಸಮಾರಂಭ, ಸಂತೆ, ಜಾತ್ರೆ, ಸಮ್ಮೇಳನ, ಸಮಾವೇಶ, ಯಾವುದೇ ಧಾರ್ಮಿಕ ಉತ್ಸವ, ಊರುಸು, ಕ್ರೀಡಾಕೂಟ, ಬೇಸಿಗೆ ಶಿಬಿರ, ಪ್ರವಾಸ, ಸ್ನೇಹ ಸಮ್ಮೇಳನ, ಸಂಗೀತ ಸಮ್ಮೇಳನ, ನಾಟಕೋತ್ಸವ, ವಿಚಾರ ಗೋಷ್ಠಿ ಹಾಗೂ ಎಲ್ಲ ಕೋಚಿಂಗ್ ಕ್ಲಾಸ್ ಹಾಗೂ ಸ್ಟಡಿ ಸೆಂಟರ್ ಗಳು ಸೇರಿದಂತೆ ಮುಂತಾದವುಗಳನ್ನು ನಿಷೇಧಿಸಲಾಗಿದೆ.
ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 188ರ ಪ್ರಕಾರ ಕ್ರಮವನ್ನು ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಅವರು ಪರಿಷ್ಕೃತ ಆದೇಶದಲ್ಲಿ ತಿಳಿಸಿದ್ದಾರೆ.