ಹುಬ್ಬಳ್ಳಿ : ಜಿಲ್ಲೆಯಲ್ಲಿ ಪತ್ತೆಯಾಗುವ ಕೊರೊನಾ ವೈರಸ್ (ಸೋಂಕಿತ) ಸಂಶಯಾಸ್ಪದ ವ್ಯಕ್ತಿಗಳನ್ನು ತಕ್ಷಣವೇ ಪರೀಕ್ಷೆಗೆ ಕರೆತರಲು ಜಿವಿಕೆ - ಇಎಂಆರ್ಐ ಸಂಸ್ಥೆ ಎರಡು ಆಂಬ್ಯುಲೆನ್ಸ್ಗಳನ್ನು (108) ನಿಯೋಜನೆ ಮಾಡಿದ್ದು, ಪಾಸಿಟಿವ್ ಪ್ರಕರಣದ ಪತ್ತೆಗೆ ಶ್ರಮಿಸುತ್ತಿದೆ.
ಎರಡು ಆಂಬ್ಯುಲೆನ್ಸ್ಗಳು ಪಿಪಿಇ ಕಿಟ್, ಮಾಸ್ಕ್, ಹ್ಯಾಂಡ್ ಗ್ಲೌಸ್, ಸ್ಯಾನಿಟೈಸರ್ ಸೇರಿದಂತೆ ತುರ್ತು ಚಿಕಿತ್ಸೆಗೆ ಅಗತ್ಯವಿರುವ ಎಲ್ಲ ವ್ಯವಸ್ಥೆಯನ್ನು ಒಳಗೊಂಡಿವೆ. ಜತೆಗೆ ವೈರಸ್ ನಾಶಕ ಔಷಧಿ ಸಿಂಪಡಣೆ ಯಂತ್ರ ಅಳವಡಿಸಲಾಗಿದೆ.
ಲಾಕ್ಡೌನ್ ಆರಂಭವಾದಾಗಿನಿಂದಲೂ ದಿನದ 24 ಗಂಟೆಗಳ ಕಾಲ ಈ ಆಂಬ್ಯುಲೆನ್ಸ್ಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿ ಆಂಬ್ಯುಲೆನ್ಸ್ನಲ್ಲಿ ತಲಾ ಒಬ್ಬರು ಪೈಲೆಟ್ (ಚಾಲಕ), ಇಬ್ಬರು ನರ್ಸ್(ಇಎಂಟಿ) ಸೇರಿದಂತೆ ಒಟ್ಟು 8 ಸಿಬ್ಬಂದಿ ಎರಡು ಪಾಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ರಾಜ್ಯ ಸರ್ಕಾರದ ಆದೇಶದ ಮೇರೆಗೆ ಜಿವಿಕೆ ಇಎಂಆರ್ಐ ಸಂಸ್ಥೆಯು ಈ ಆಂಬ್ಯುಲೆನ್ಸ್ ಸೇವೆಯನ್ನು ಒದಗಿಸುತ್ತಿದ್ದು, ರೋಗಿಯನ್ನು ಕರೆತಂದ ನಂತರ ಇಡೀ ಆಂಬ್ಯುಲೆನ್ಸ್ನ್ನು ವೈರಸ್ ನಿವಾರಕ ಔಷಧಿಯನ್ನು ಸಿಂಪಡಣೆ ಮಾಡುವ ಮೂಲಕ ಸ್ವಚ್ಛಗೊಳಿಸಲಾಗುತ್ತದೆ.
ಜಿಲ್ಲೆಯಲ್ಲಿ ಇಲ್ಲಿಯವರೆಗೂ 300ಕ್ಕೂ ಹೆಚ್ಚು ಕೊರೊನಾ ಸಂಶಯಾಸ್ಪದ ವ್ಯಕ್ತಿಗಳನ್ನು ಈ ಆಂಬ್ಯುಲೆನ್ಸ್ನಲ್ಲಿ ಕರೆತಂದು ಚಿಕಿತ್ಸೆಗೆ ಒಳಪಡಿಸಲಾಗಿದೆ.