ಧಾರವಾಡ: ರಸಗೊಬ್ಬರ ನಿಯಂತ್ರಣ ಕಾಯ್ದೆ ಉಲ್ಲಂಘಿಸಿ ಕೆಲವು ರೈತರ ಹೆಸರಲ್ಲಿ ರಸಗೊಬ್ಬರ ಮಾರಾಟ ಮಾಡುತ್ತಿದ್ದ ಹತ್ತು ಗೊಬ್ಬರ ವಿತರಕರು ಹಾಗೂ ಚಿಲ್ಲರೆ ಮಾರಾಟಗಾರರ ಪರವಾನಿಗೆಯನ್ನು ಜಿಲ್ಲಾಧಿಕಾರಿ ಅಮಾನತು ಮಾಡಿದ್ದಾರೆ.

ಜಿಲ್ಲೆಯಾದ್ಯಂತ ಉತ್ತಮ ಬಿತ್ತನೆಯಾಗಿದ್ದು, ಹೆಚ್ಚಿನ ಮಳೆ ಸಹ ಆಗುತ್ತಿರುವುದರಿಂದ ರೈತರಿಂದ ಯೂರಿಯಾ ರಸಗೊಬ್ಬರದ ಬೇಡಿಕೆ ಹೆಚ್ಚಿದೆ. ಈ ಸಂದರ್ಭದಲ್ಲಿ ರಸಗೊಬ್ಬರ ಮಾರಾಟ ಪರವಾನಗಿ ಹೊಂದಿದ ಕೆಲವು ವಿತರಕರು, ರಸಗೊಬ್ಬರ ನಿಯಂತ್ರಣ ಕಾಯ್ದೆ 1985 ರ ಉಲ್ಲಂಘನೆ ಮಾಡಿ ಕೆಲವು ರೈತರ ಹೆಸರಲ್ಲಿ ಅವರು ಹೊಂದಿದ ಜಮೀನಿನ ಪ್ರಮಾಣಕ್ಕಿಂತಲೂ ಅಧಿಕ ರಸಗೊಬ್ಬರ ಮಾರಾಟ ಮಾಡಿರುವ ಅಂಶ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಹತ್ತು ರಸಗೊಬ್ಬರ ವಿತರಕರು ಹಾಗೂ ಚಿಲ್ಲರೆ ಮಾರಾಟಗಾರರ ಪರವಾನಿಗೆಗಳನ್ನು ತಕ್ಷಣದಿಂದಲೇ ಅಮಾನತು ಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ತಿಳಿಸಿದ್ದಾರೆ.

ವೀರಭದ್ರೇಶ್ವರ ಅಗೋ ಟ್ರೇಡರ್ಸ್- ಗರಗ ತಾ : ಧಾರವಾಡ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ , ಡೋರಿ , ತಾ : ಅಳ್ಳಾವರ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ , ತಾವರಗೇರಿ , ತಾ : ಕಲಘಟಗಿ
ಕೆ.ಬಿ.ಎನ್ . ಅಗ್ರೋ ಸೆಂಟರ್ ಮತ್ತು ಟ್ರೇಡರ , ಕಲಘಟಗಿ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ , ಅಣ್ಣಿಗೇರಿ ತಾ : ಅಣ್ಣಿಗೇರಿ
ಜುವಾರಿ ಅಗ್ರೋ ಕೆಮಿಕಲ್ಸ್ ಲಿ, (ಜುವಾರಿ ಜಂಕ್ಷನ್ ) ನವಲಗುಂದ, ತಾ : ನವಲಗುಂದ
ಎಕ್ಸಡ್ ಕ್ರಾಪ್ ಸೈನ್ಸ್ ಪ್ರೈ.ಲಿ , ಗಾಮನಗಟ್ಟಿ , ತಾ : ಹುಬ್ಬಳ್ಳಿ
ಮೆ . ಬಸವೇಶ್ವರ ಸೌಹಾರ್ದ ಸಹಕಾರಿ ನಿಯಮಿತ , ಹುಬ್ಬಳ್ಳಿ ತಾ : ಹುಬ್ಬಳ್ಳಿ
ಸಂಯುಕ್ತ ಅಗ್ರಿಟೆಕ್ , ಗಾಮನಗಟ್ಟಿ ತಾ : ಹುಬ್ಬಳ್ಳಿ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ , ಬು.ತರ್ಲಘಟ್ಟ , ತಾ : ಕುಂದಗೋಳ
ಕೃಷಿ ಇಲಾಖೆಯ ಪರಿವೀಕ್ಷಕರುಗಳು ಜಿಲ್ಲೆಯ ಎಲ್ಲಾ ರಸಗೊಬ್ಬರ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲಿಸುವ ಕಾರ್ಯ ಮುಂದುವರೆಸಲಿದ್ದಾರೆ. ತಪ್ಪಿತಸ್ಥರ ವಿರುದ್ಧ ರಸಗೊಬ್ಬರ ನಿಯಂತ್ರಣ ಕಾಯ್ದೆಯಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.