ದಾವಣಗೆರೆ: ಕೊರೊನಾ ನಿಯಂತ್ರಣ ಕುರಿತಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ದೀಪಾ ಜಗದೀಶ್ ಅಧ್ಯಕ್ಷತೆಯಲ್ಲಿ ಹೊನ್ನಾಳಿ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಸಭೆ ನಡೆಸಲಾಯಿತು.
ಜಿಲ್ಲಾ ಪಂಚಾಯತ್ ಸದಸ್ಯರು, ತಾಲೂಕು ಪಂಚಾಯತ್ ಸದಸ್ಯರು, ಪಿಡಿಓಗಳಿಗೆ ಅವರ ವ್ಯಾಪ್ತಿಯಲ್ಲಿ ಕೋವಿಡ್-19 ರೋಗ ನಿಯಂತ್ರಣ ಮಾಡುವ ಕುರಿತು ನಿರ್ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ಮೂಡಿಸಲಾಯಿತು. ಸಭೆಯಲ್ಲಿ ಜಿ.ಪಂ. ಸಿಇಒ ಪದ್ಮಾ ಬಸವಂತಪ್ಪ, ಇತರೆ ಅಧಿಕಾರಿಗಳು ಹಾಜರಿದ್ದರು.
ಕ್ವಾರಂಟೈನ್ ಕೇಂದ್ರಗಳಿಗೆ ಹಿರಿಯ ಸಿವಿಲ್ ನ್ಯಾಯಾಧೀಶರ ಭೇಟಿ:
ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾಧೀಶರ ಆದೇಶದ ಮೇರೆಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಾಬಪ್ಪರವರು ಕ್ವಾರಂಟೈನ್ ಕೇಂದ್ರಗಳಾದ ನಿಸರ್ಗ ವಸತಿ ಗೃಹ, ಸವಣೂರು ವಸತಿ ಗೃಹ, ಹಾಗೂ ಆವರಗೊಳ್ಳ-ಕಕ್ಕರಗೊಳ್ಳ ಮೂರಾರ್ಜಿ ದೇಸಾಯಿ ಶಾಲೆ, ಶ್ಯಾಗಲೆ ಸಮುದಾಯ ಭವನಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಕ್ವಾರಂಟೈನ್ ಕೇಂದ್ರಗಳಲ್ಲಿರುವ ಸ್ವಚ್ಚತೆ, ಊಟೋಪಚಾರ, ಮಾಸ್ಕ್, ಸ್ಯಾನಿಟೈಸರ್ ನಿರ್ವಹಣೆಯ ಬಗ್ಗೆ ಮಾಹಿತಿ ಪಡೆದುಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು.
ಚನ್ನಗಿರಿ ಪಟ್ಟಣದ ಗೌಡ್ರು ಬೀದಿ ಕಂಟೈನ್‍ಮೆಂಟ್ ವಲಯ:
ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿ ಕೊರೊನಾ ಪಾಸಿಟಿವ್ ವರದಿಯಾಗಿದ್ದ ರೋಗಿ ಸಂಖ್ಯೆ 8806 ರ ಪ್ರದೇಶವನ್ನು ಕಂಟೈನ್‍ಮೆಂಟ್ ವಲಯವೆಂದು ಘೋಷಿಸಿ ಕ್ರಮ ಕೈಗೊಳ್ಳಲಾಗಿದೆ.
ಜೂ. 21ರಂದು ಕೋವಿಡ್ ಪಾಸಿಟಿವ್ ಆಗಿದ್ದ ರೋಗಿ ಸಂಖ್ಯೆ 8806 ನೆಲೆಸಿದ್ದ ಮನೆಯ ಸುತ್ತಮುತ್ತಲಿನ ಪ್ರದೇಶ ಹಾಗೂ ಕುರುಬರ ಬೀದಿ ವ್ಯಾಪ್ತಿಯಲ್ಲಿ 62 ಮನೆಗಳು, 211 ಜನಸಂಖ್ಯೆ ಹಾಗೂ 200 ಮೀಟರ್ ಬಫರ್ ಝೋನ್ ಸೇರಿದಂತೆ ಈ ವಲಯವನ್ನು ಕಂಟೈನ್‍ಮೆಂಟ್ ಝೋನ್ ಎಂದು ಘೋಷಿಸಿ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಆದೇಶ ಹೊರಡಿಸಿದ್ದಾರೆ.