ದಾವಣಗೆರೆ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ತಮ್ಮ ಅಧಿಕಾರವಧಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವಸತಿ ಯೋಜನೆ ಗುತ್ತಿಗೆ ನೀಡುವ ಸಲುವಾಗಿ ಕೋಟ್ಯಂತರ ರೂಪಾಯಿ ಲಂಚ ಪಡೆದಿದ್ದಾರೆ ಎಂಬ ಆರೋಪ ಸಂಬಂಧ ತನಿಖೆ ನಡೆಸಲು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿದೆ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಇದು ಒಳ್ಳೆಯ ವಿಚಾರ. ಹೊಸ ವಿಚಾರಣೆ ನಡೆಯಬೇಕು, ಸತ್ಯಾಂಶ ಹೊರ ಬರಬೇಕು. ಎಲ್ಲರೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಇಂತಹ ಸಂದರ್ಭ ಬರುವುದಿಲ್ಲ. ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ. ಲೋಕಾಯುಕ್ತ ಜವಾಬ್ದಾರಿಯಿಂದ ಕೆಲಸ ಮಾಡಲಿ ಎಂದರು.
ಇದನ್ನೂ ಓದಿ: ಎಸಿಬಿ ಕೇಸ್ಗಳು ಲೋಕಾಯುಕ್ತಕ್ಕೆ.. ಮಹತ್ವದ ಸಭೆ ಕರೆದ ಲೋಕಾಯುಕ್ತ ನ್ಯಾ. ಬಿ.ಎಸ್. ಪಾಟೀಲ್
ಎಸಿಬಿ ಅಧಿಕಾರಿಗಳನ್ನು ಲೋಕಾಯುಕ್ತಕ್ಕೆ ನೇಮಕ ಮಾಡುತ್ತಿರುವ ವಿಚಾರದ ಕುರಿತು ಮಾತನಾಡಿದ ಅವರು, ಎಸಿಬಿ ಅಧಿಕಾರಿಗಳನ್ನೇ ಲೋಕಾಯುಕ್ತಕ್ಕೆ ನೇಮಕ ಮಾಡ್ತಿರುವುದು ಸೂಕ್ತವಾದ ಕ್ರಮವಲ್ಲ. ಅಧಿಕಾರಿಗಳ ಬಗ್ಗೆ ಮಾಹಿತಿ ಪಡೆದು ಲೋಕಾಯುಕ್ತರು ನೇಮಕ ಮಾಡಬೇಕು, ರಾಜಕಾರಣಿಗಳಿಗೆ ಇಷ್ಟವಾದ ಅಧಿಕಾರಿಗಳನ್ನು ಕಳುಹಿಸಬಾರದು. ಲೋಕಾಯುಕ್ತರೇ ಸೂಕ್ತವಾದ ಅಧಿಕಾರಿಗಳನ್ನು ಆಯ್ಕೆ ಮಾಡುವಂತೆ ಆಗಬೇಕು ಎಂದು ಸಲಹೆ ನೀಡಿದರು.
ಏನಿದು ಪ್ರಕರಣ?: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಗುತ್ತಿಗೆ ನೀಡುವುದಕ್ಕೆ ಪ್ರತಿಯಾಗಿ ಯಡಿಯೂರಪ್ಪ ಮತ್ತು ಅವರ ಕುಟುಂಬ ಸದಸ್ಯರು ರಾಮಲಿಂಗಂ ಕನ್‌ಸ್ಟ್ರಕ್ಷನ್ ಕಂಪನಿ ಮತ್ತು ಇತರ ಶೆಲ್ ಕಂಪನಿಗಳಿಂದ ಲಂಚ ಪಡೆದಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ದೂರು ದಾಖಲಿಸಿದ್ದರು.
ಇದನ್ನೂ ಓದಿ: ಬಿಎಸ್ವೈ ವಿರುದ್ಧದ ಭ್ರಷ್ಟಾಚಾರ ಕೇಸ್.. ವಿಚಾರಣೆ ನಡೆಸುವಂತೆ ವಿಶೇಷ ಕೋರ್ಟ್ಗೆ ಹೈಕೋರ್ಟ್ ನಿರ್ದೇಶನ
ಯಡಿಯೂರಪ್ಪ ಪರವಾಗಿ ಐಎಎಸ್ ಅಧಿಕಾರಿ ಜಿ.ಸಿ.ಪ್ರಕಾಶ್ 12 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಪ್ರಕಾಶ್ ವಸೂಲಿ ಮಾಡಿ ಮಗನ ಮೂಲಕ ಯಡಿಯೂರಪ್ಪಗೆ ಪಾವತಿಸಿದ್ದಾರೆ ಎನ್ನಲಾಗಿದೆ. ಯಡಿಯೂರಪ್ಪ, ವಿಜಯೇಂದ್ರ, ಶಶಿಧರ್ ಮರಡಿ ಮತ್ತು ಸಂಜಯ್ ಶ್ರೀಗಳು ಶೆಲ್ ಕಂಪನಿಗಳನ್ನು ಬಳಸಿಕೊಂಡು ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಅರ್ಜಿದಾರರು ದೂರಿನಲ್ಲಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಅಕ್ರಮ ಡಿನೋಟಿಫಿಕೇಶನ್ ಆರೋಪ ಪ್ರಕರಣ.. ಬಿಎಸ್ವೈ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಕೋರ್ಟ್ ಆದೇಶ