ಹರಿಹರ: ಉತ್ತರ ಭಾರತದಲ್ಲಿ ಹರಿದ್ವಾರ ಪ್ರಖ್ಯಾತಿ ಹೊಂದಿರುವ ರೀತಿಯೇ ಕರ್ನಾಟಕದ ಕೇಂದ್ರ ಬಿಂದು ಹರಿಹರವೂ ಮತ್ತೊಂದು ಹರಿದ್ವಾರವಾಗಿ ವಿಶ್ವವಿಖ್ಯಾತಿ ಹೊಂದಲಿ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಮಠದ ಪೀಠಾಧಿಪತಿ ಶ್ರೀವಚನಾನಂದ ಸ್ವಾಮೀಜಿ ಹೇಳಿದ್ದಾರೆ.
ನಗರದಲ್ಲಿ ವಿಜಯದಶಮಿ ಅಂಗವಾಗಿ ಮಂಗಳವಾರ ಸಾಮೂಹಿಕ ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ ದೇವಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.
ಮೆರವಣಿಗೆಯಲ್ಲಿ ಸ್ತಬ್ದ ಚಿತ್ರಗಳು, ವಿವಿಧ ದೇವರ ಉತ್ಸವಮೂರ್ತಿ, ಪಲ್ಲಕ್ಕಿಗಳು ಹಾಗೂ ಅಂಬಾರಿಯಲ್ಲಿ ದೇವಿಯ ಉತ್ಸವ ಮೂರ್ತಿ ಹೊತ್ತ ಆನೆ ರಾಜ ಗಾಂಭೀರ್ಯದಿಂದ ಸಾಗಿತು. ನಂದಿಕೋಲು ಕುಣಿತ, ಡೊಳ್ಳು ಕುಣಿತ, ಸಮಾಳ ವಾದ್ಯ ಮೆರವಣಿಗೆಗೆ ಉತ್ಸಾಹ ತುಂಬಿತು. ವೇಷಭೂಷಣ ಧರಿಸಿದ ಕಲಾವಿದರ ನೃತ್ಯ ನೋಡುಗರಿಗೆ ಮನರಂಜನೆ ನೀಡಿತು.
ದೇವಸ್ಥಾನದ ರಸ್ತೆ, ಮುಖ್ಯ ರಸ್ತೆ, ಮಹಾತ್ಮ ಗಾಂಧಿ ವೃತ್ತ, ಪಿಬಿ ರಸ್ತೆಯ ಮೂಲಕ ಸಾಗಿದ ಮೆರವಣಿಗೆ ಜೋಡು ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬನ್ನಿ ಮುಡಿಯಲು ಸೇರಿತು.