ದಾವಣಗೆರೆ: ರಾಜ್ಯದಲ್ಲಿ ಮಂದಿರ, ಮಸೀದಿ ವಿಚಾರ ಚರ್ಚೆ ನಡೆಯುತ್ತಿದೆ. ಇದಕ್ಕೆ ಸಂಬಂಧಪಟ್ಟವರು ಉತ್ತರ ನೀಡಿದ್ದಾರೆ. ಈ ವಿಚಾರ ಬೀದಿಗೆ ಬಂದ್ರೆ ಮಾತ್ರ ನಮ್ಮದು, ಅಂದ್ರೆ ಗೃಹ ಇಲಾಖೆಯ ಪಾತ್ರ ಬರುತ್ತೆ. ರಾಜ್ಯದಲ್ಲಿ ಸದ್ಯಕ್ಕೆ ಯಾವುದೇ ಕೋಮುಗಲಭೆ ಅಥವಾ ಹಿಜಾಬ್ ವಿವಾದ ಇಲ್ಲ. ಕಾನೂನು ಸುವ್ಯವಸ್ಥೆ ಸರಿಯಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.
ಎಸ್ಪಿ ಕಚೇರಿಯಲ್ಲಿಂದು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಶಿಕ್ಷಣ ಸಚಿವ ಬಿ ಸಿ ನಾಗೇಶ್ ಮನೆಗೆ ಹೋಗಿ ಕಾಂಗ್ರೆಸ್ ಮಾಡಿರುವ ಹೋರಾಟ ಸರಿಯಿಲ್ಲ. ಅಕ್ರಮವಾಗಿ ಮನೆಗೆ ನುಗ್ಗಿ ಅವರ ಚಡ್ಡಿ ತಂದು ಸುಟ್ಟಿದ್ದು ಸರಿಯಲ್ಲ. ಮೇಲಾಗಿ ಅವರ್ಯಾರು ಸಹ ವಿದ್ಯಾರ್ಥಿಗಳೇ ಅಲ್ಲ. ದಾವಣಗೆರೆಯ ಮೂರು ಜನ ಕೂಡ ಇದರಲ್ಲಿ ಭಾಗಿಯಾಗಿದ್ದಾರೆ. ಇವರೆಲ್ಲರ ಹಿನ್ನೆಲೆ ಬಗ್ಗೆ ತನಿಖೆ ನಡೆಯುತ್ತಿದೆ. ಹೋರಾಟಕ್ಕೆ ಒಪ್ಪಿಗೆ ಪಡೆದುಕೊಂಡಿಲ್ಲ ಎಂದರು.
ಪಿಎಸ್ಐ ನೇಮಕಾತಿ ಹಗರಣ: ರಾಜ್ಯದಲ್ಲಿ ನಡೆದ ಪಿಎಸ್ಐ ನೇಮಕಾತಿಯಲ್ಲಿ ನಡೆದ ಹಗರಣದ ಬಗ್ಗೆ ಸೂಕ್ತ ತನಿಖೆ ನಡೆಯುತ್ತಿದೆ. ಇಂತಹ ಅವ್ಯವಹಾರ ಮೊದಲಿನಿಂದಲೇ ನಡೆದುಕೊಂಡು ಬಂದಿದೆ. ಆದ್ರೆ ಅಂತವರು ಮುಟ್ಟಿಕೊಂಡು ನೋಡಿಕೊಳ್ಳುವಂತೆ ಮಾಡುತ್ತೇವೆ. ನಮ್ಮ ಇಲಾಖೆ ಡಿವೈಎಸ್ಪಿಗಳನ್ನೇ ಬಂಧಿಸಿದೆ. ತನಿಖಾ ತಂಡ ಕೂಡ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂದು ಸಿಐಡಿ ತಂಡದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ರು.
ಬೆಂಗಳೂರಿನಲ್ಲಿ ಉಗ್ರನ ಬಂಧನ: ನಮ್ಮ ರಾಜ್ಯದ ಹಾಗೂ ಜಮ್ಮು ಕಾಶ್ಮೀರದ ಪೊಲೀಸರು ಸೇರಿ ಬೆಂಗಳೂರಿನಲ್ಲಿ ಉಗ್ರನನ್ನು ಬಂಧಿಸಿದ್ದಾರೆ. ಈಗಾಗಲೇ ಶ್ರೀನಗರ ಪೊಲೀಸರು ಓರ್ವನನ್ನು ಬಂಧಿಸಿ ಕರೆದೊಯ್ದಿದ್ದಾರೆ. ನಮ್ಮ ಪೊಲೀಸರು ಸಹ ಶ್ರೀನಗರ ಪೊಲೀಸರ ಜೊತೆ ಸಂಪರ್ಕದಲ್ಲಿದ್ದಾರೆ. ದೇಶದ ಸಮಗ್ರತೆ ದೃಷ್ಟಿಯಿಂದ ಈ ಬಗ್ಗೆ ಹೆಚ್ಚು ಮಾತನಾಡಲ್ಲ. ಇದರ ಬಗ್ಗೆ ನಮ್ಮ ಪೊಲೀಸರು ಕೂಡ ಸಾಕಷ್ಟು ತನಿಖೆ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:ಉಪ್ಪಿನಂಗಡಿ ಕಾಲೇಜ್ಗೆ ಹಿಜಾಬ್ ಧರಿಸಿ ಬಂದಲ್ಲಿ ಸೂಕ್ತ ಕ್ರಮ: ಸಂಜೀವ ಮಠಂದೂರು
ಸ್ಯಾಟಲೈಟ್ ಕಾಲ್ ವಿಚಾರ ತನಿಖೆ: ಸ್ಯಾಟಲೈಟ್ ಫೋನ್ ಮೂಲಕ ದುಷ್ಕರ್ಮಿಗಳು ಮೂರ್ನಾಲ್ಕು ಕಡೆ ಮಾತನಾಡಿರುವುದು ತಿಳಿದುಬಂದಿದೆ. ಕೇಂದ್ರದ ಏಜೆನ್ಸಿಯೊಂದಿಗೆ ನಮ್ಮ ಪೊಲೀಸರು ಸಂಪರ್ಕದಲ್ಲಿದ್ದಾರೆ. ಈಗಾಗಲೇ ಶಿವಮೊಗ್ಗ ಸೇರಿದಂತೆ ಕೆಲ ಕಡೆ ಸ್ಯಾಟಲೈಟ್ ಕಾಲ್ ಮೂಲಕ ಮಾತನಾಡಿದ್ದು ಗೊತ್ತಾಗಿದೆ. ಇದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಸಚಿವ ಜ್ಞಾನೇಂದ್ರ ಹೇಳಿದರು.