ದಾವಣಗೆರೆ: ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್. ಈಶ್ವರಪ್ಪ ಕಾಂಗ್ರೆಸ್ ಪಕ್ಷವನ್ನು ಮಹಿಳೆಯರ ತುರುಬಿಗೆ ಹೋಲಿಸುವ ಮೂಲಕ ಸ್ತ್ರೀ ಕುಲದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕ, ನಮಗೆ ತುರುಬು ಕಟ್ಟುವುದು ಗೊತ್ತು, ಬಿಚ್ಚುವುದು ಗೊತ್ತು. ಪಾಲಿಕೆ ಚುನಾವಣೆಯಲ್ಲಿ ಮಹಿಳಾ ಪವರ್ ಏನೆಂಬುದನ್ನು ತೋರಿಸುತ್ತೇವೆ ಎಂದು ಗುಡುಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಘಟಕದ ಜಿಲ್ಲಾಧ್ಯಕ್ಷೆ ಅನಿತಾ ಬಾಯಿ ಮಾಲತೇಶ್, ಉನ್ನತ ಹುದ್ದೆಯಲ್ಲಿರುವವರು ಮಹಿಳಾ ಕುಲದ ಬಗ್ಗೆ ಹಗುರವಾಗಿ ಮಾತನಾಡಿರುವುದು ಶೋಭೆ ತರುವಂಥದ್ದಲ್ಲ. ಯಾವ ವಿಚಾರಕ್ಕಾದರೂ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು, ಯಾರೇ ಕೆಟ್ಟದಾಗಿ ಮಾತನಾಡಿದರೂ ಅದು ಸರಿಯಲ್ಲ. ನಮಗೂ ಮಾತನಾಡಲು ಬರುತ್ತೆ ಎಂದು ಆಕ್ರೋಶ ಹೊರ ಹಾಕಿದರು.
ಮುಂಬರುವ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಮಹಿಳೆಯರು ಮತ ಹಾಕಬಾರದು. ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವವರ ಪಕ್ಷಕ್ಕೆ ಮತ ಹಾಕಬೇಡಿ ಎಂದು ದಾವಣಗೆರೆ ಮಹಿಳಾ ಮತದಾರರಲ್ಲಿ ಮನವಿ ಮಾಡುತ್ತೇನೆ. ಚುನಾವಣೆಯಲ್ಲಿ ಬೆಣ್ಣೆನಗರಿಯ ಮಹಿಳೆಯರ ಶಕ್ತಿ ಏನೆಂಬುದನ್ನು ತೋರಿಸುತ್ತೇವೆ ಎಂದ ಅವರು, ಘನತೆಗೆ ತಕ್ಕಂತೆ ಈಶ್ವರಪ್ಪ ಮಾತನಾಡಬೇಕು ಎಂದು ಎಚ್ಚರಿಕೆಯನ್ನೂ ನೀಡಿದರು.