ದಾವಣಗೆರೆ : ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಕಾರ್ಯವೈಖರಿಗೆ ಮನಸೋತ ಮಹಿಳಾಮಣಿಯರು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಹೊನ್ನಾಳಿ ಪಟ್ಟಣದಲ್ಲಿರುವ ಚನ್ನಪ್ಪಸ್ವಾಮಿ ಸಮುದಾಯ ಭವನದಲ್ಲಿ ಆಯೋಜನೆ ಮಾಡಿದ್ದ ಕಾರ್ಯಕ್ರಮದ ಉದ್ಘಾಟನೆಗೆ ಎಂ ಪಿ ರೇಣುಕಾಚಾರ್ಯ ಆಗಮಿಸಿದ್ದರು. ಈ ವೇಳೆ ಶಾಸಕ ರೇಣುಕಾಚಾರ್ಯ ಜೊತೆ ಫೋಟೋ ತೆಗೆಸಿಕೊಳ್ಳಲು ಮಹಿಳೆಯರು ಮುಂದಾದರು.
ಇದರಿಂದ ಸುಸ್ತ್ ಹೊಡೆದ ರೇಣುಕಾಚಾರ್ಯ, ನೀವೆಲ್ಲಾ ನನಗೆ ಹಾಗೂ ಜಿ ಎಂ ಸಿದ್ದೇಶ್ವರ್ ರವರಿಗೆ ರಾಖಿ ಕಟ್ಟಿದ್ದೀರಿ, ನಿಮ್ಮ ಶ್ರೀರಕ್ಷೆ ನಮಗೆ ಈಗ ಅಲ್ಲ ಚುನಾವಣೆಯಲ್ಲಿ ನಮ್ಮನ್ನು ಗೆಲ್ಲಿಸಿದಾಗಲೇ ನೀವು ನಮಗೆ ಶ್ರೀರಕ್ಷೆ ನೀಡಿದ್ದೀರಿ. ನಿಮ್ಮ ಸೇವೆ ಮಾಡಲು ನಾವು ಯಾವಾಗಲೂ ಸಿದ್ಧ ಎಂದ ರೇಣುಕಾಚಾರ್ಯ ಸೆಲ್ಫಿಗೆ ಪೋಸ್ ನೀಡಿ ಮುಂದೆ ನಡೆದರು.
ಕಾರ್ಯಕ್ರಮದಲ್ಲಿ ಕೊರೊನಾ ನಿಯಮಾವಳಿ ಉಲ್ಲಂಘನೆ : ಸಾಮಾಜಿಕ ಅಂತರವಿಲ್ಲದೆ ಕಾರ್ಯಕ್ರಮ ನಡೆಸಲಾಗಿದೆ. ಒಂದೇ ಹಾಲ್ನಲ್ಲಿ ನೂರಾರು ಮಹಿಳೆಯರು ಜಮಾವಣೆ ಆಗಿದ್ದರಿಂದ ಕೊರೊನಾ ನಿಯಮಾವಳಿ ಉಲ್ಲಂಘನೆಯಾಯ್ತು. ಜನಪ್ರನಿಧಿಗಳಿಗೆ ಒಂದು ಕಾನೂನು, ಜನ ಸಾಮಾನ್ಯರಿಗೆ ಒಂದು ಕಾನೂನು ಎಂಬಂತೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಕಣ್ಮುಚ್ಚಿ ಕುಳಿತಿರೋದು ಅಚ್ಚರಿಗೆ ಕಾರಣವಾಯಿತು.