ದಾವಣಗೆರೆ: ಹಲವು ವರ್ಷಗಳಿಂದ ವಿಪರೀತ ಹೊಟ್ಟೆನೋವಿನಿಂದ ಬಳಲುತ್ತಿದ್ದ ಮಹಿಳೆಯೋರ್ವರು ಮನನೊಂದು ತನ್ನ 11 ತಿಂಗಳ ಪುಟ್ಟ ಕಂದಮ್ಮನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೊಡ್ಡೇರಿಕಟ್ಟೆ ಗ್ರಾಮದಲ್ಲಿ ನಡೆದಿದೆ.
ಓದಿ:ಜಾತ್ರೆಗೆ ಬಂದ ಬಾಲಕರಿಬ್ಬರು ತುಂಗಭದ್ರಾ ನದಿಯಲ್ಲಿ ಮುಳುಗಿ ಸಾವು
ಮಹಿಳೆಗೆ ಹಲವು ವರ್ಷಗಳಿಂದ ಹೊಟ್ಟೆನೋವಿದ್ದು, ಆಸ್ಪತ್ರೆಗಳಿಗೆ ಎಷ್ಟೇ ಅಲೆದರು ಗುಣವಾಗಿರಲಿಲ್ಲ. ಈ ಹಿನ್ನೆಲೆ ಮಹಿಳೆ ಮನನೊಂದು ತನ್ನ 11 ತಿಂಗಳ ಪುಟ್ಟ ಕಂದಮ್ಮನೊಂದಿಗೆ ನೇಣಿಗೆ ಶರಣಾಗಿದ್ದಾರೆ. ಮೊದಲು ಮಗುವನ್ನು ನೇಣು ಬಿಗಿದು ಸಾಯಿಸಿದ ಬಳಿಕ ಮಹಿಳೆ ಕೂಡ ನೇಣಿಗೆ ಕೊರಳೊಡ್ಡಿದ್ದಾಳೆ. ಶ್ವೇತಾ (26), ಪುತ್ರಿ ಜಾಹ್ನವಿ ಮೃತರು. ಈ ಸಂಬಂಧ ಸಂತೆಬೆನ್ನೂರು ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸುವ ಮೂಲಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಡೆದಿದ್ದಾದರೂ ಏನು?
ಮೃತ ಶ್ವೇತಾಳ ಹಿರಿಯ ಮಗಳು ಯಶಸ್ವಿನಿ ಹಾಗೂ ಶ್ವೇತಾಳ ತಾಯಿ ಲತಾ ಪೂಜೆಗೆಂದು ತೋಟಕ್ಕೆ ತೆರಳಿದ್ದಾರೆ. ಶ್ವೇತಾಳ ತಂದೆ ತಿಮ್ಮಪ್ಪ ದಿನನಿತ್ಯದಂತೆ ಕೆಲಸದಲ್ಲಿ ಮಗ್ನನಾಗಿದ್ದಾನೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಶ್ವೇತಾ ಹಾಗೂ ಮಗಳು ಜಾಹ್ನಾವಿ ನೇಣಿಗೆ ಶರಣಾಗಿದ್ದಾರೆ. ಇನ್ನು ಶ್ವೇತಾಳ ತಂದೆ ತಿಮ್ಮಪ್ಪ ನೀರು ಕುಡಿಯಲು ಮನೆಗೆ ಆಗಮಿಸಿದಾಗ ಮನೆಯ ಅಟ್ಟದ ತೊಲೆಯಲ್ಲಿ ತಾಯಿ-ಮಗುವಿನ ಮೃತದೇಹ ನೇತಾಡುತ್ತಿರುವ ದೃಶ್ಯ ಕಂಡುಬಂದಿದೆ.