ದಾವಣಗೆರೆ: ಜಿಲ್ಲಾಧಿಕಾರಿ ಕಚೇರಿ ನಿರ್ಮಾಣಕ್ಕೆ ಜಮೀನು ನೀಡಿ ಪರಿಹಾರ ಸಿಗದೆ ಕಂಗಾಲಾದ ಬಡ ರೈತ ಮಹಿಳೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಎದುರು ಆಕ್ರೋಶ ಹೊರಹಾಕಿದ ಘಟನೆ ಜರುಗಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಚಿವ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ನಡೆಯುತ್ತಿದ್ದ ಸಭೆಗೆ ಆಗಮಿಸಿದ ಹಫೀಝಾ ಬಾನು ಎಂಬ ಮಹಿಳೆ, ತನಗೆ ಸೇರಿದ 12 ಎಕರೆ ಜಮೀನು ಪಡೆದು ಜಿಲ್ಲಾಧಿಕಾರಿ ಕಚೇರಿ ನಿರ್ಮಾಣ ಮಾಡಿದ್ದಾರೆ. ಆದರೆ ಪರಿಹಾರ ನೀಡದೆ ಸತಾಯಿಸುತ್ತಿದ್ದಾರೆ ಅಂತಾ ಸಚಿವರ ಎದುರೇ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಅಧಿಕಾರಿಗಳು ಜವಳಿ ಪಾರ್ಕ್ ನಿರ್ಮಾಣ ಮಾಡುತ್ತೇವೆ ಎಂದು ಕೃಷಿ ಜಮೀನನ್ನು ಬಳಕೆ ಮಾಡಿಕೊಂಡು ಜಿಲ್ಲಾಧಿಕಾರಿ ಕಚೇರಿ ನಿರ್ಮಾಣ ಮಾಡಿ, ಬಡ ಮಹಿಳೆಗೆ ಪರಿಹಾರ ನೀಡದೆ 20 ವರ್ಷಗಳಿಂದ ಸತಾಯಿಸುತ್ತಿರುವುದನ್ನು ಸಚಿವರ ಗಮನಕ್ಕೆ ತರಲಾಯಿತು. ಸಭೆಯಲ್ಲೇ ಕೆಲ ರೈತ ಹೋರಾಟಗಾರರು ಏರು ಧ್ವನಿಯಲ್ಲೇ 'ನೀನು ಹಣ ಪಡೆಯುವ ತನಕ ಬಿಡ್ಬೇಡ' ಎಂದು ಮಹಿಳೆಗೆ ಒತ್ತಾಯಿಸಿದರು.
ಬಳಿಕ ಮಾತನಾಡಿದ ಸಚಿವರು, ನಾನು ನಿಮ್ಮ ಸಮಸ್ಯೆ ಬಗೆಹರಿಸುತ್ತೇನೆ. ಇಪ್ಪತ್ತು ವರ್ಷಗಳಿಂದ ನಾನು ಸಚಿವನಾಗಿಲ್ಲ. ಕಳೆದ ಒಂದು ವರ್ಷದಿಂದ ಸಚಿವನಾಗಿದ್ದೇನೆ. ಅಧಿಕಾರಿಗಳ ಬಳಿ ಕೂತು ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸುತ್ತೇನೆ ಎಂದರು. ಇದಕ್ಕೆ ಸಂತ್ರಸ್ತ ಮಹಿಳೆ ಹಾಗೂ ಅವರ ಸಂಬಂಧಿ ಒಪ್ಪದೇ ಇದ್ದಾಗ, ನನಗೆ ಸಮಯ ಕೊಡಿ, ಬಗೆಹರಿಸುತ್ತೇನೆ ಎಂದು ಹೇಳುತ್ತಿದ್ದೇನೆ. ಅರ್ಥ ಮಾಡಿಕೊಳ್ಳಿ ಎಂದು ಏರು ಧ್ವನಿಯಲ್ಲಿ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ರು.
ಇದನ್ನೂ ಓದಿ:ರೈತ ವಿರೋಧಿ ಕಾಯ್ದೆ ಹಿಂಪಡೆಯಲು ಮೋದಿಗೆ ಪ್ರತಿಷ್ಠೆ ಅಡ್ಡಿ : ಸಿದ್ದರಾಮಯ್ಯ