ದಾವಣಗೆರೆ : ನ್ಯಾಮತಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಹಂದಿ ಭೇಟೆಗಾರರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳ ಆಯುಧ ಪರಿಶೀಲನೆ ವೇಳೆ ಮಿಸ್ ಫೈರ್ ಆಗಿ ಓರ್ವ ಪೊಲೀಸ್ ಸಿಬ್ಬಂದಿಗೆ ಗಾಯವಾಗಿದೆ. ಗಾಯಾಳುವನ್ನ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನ್ಯಾಮತಿ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್‌ಟೇಬಲ್ ನಾಗರಾಜ್ ಕೈಗೆ ಗಾಯವಾಗಿದೆ. ಆದರೆ, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನ್ಯಾಮತಿ ತಾಲೂಕಿನ ಸವಳಂಗ ಬಳಿ ಘಟನೆ ಜರುಗಿದೆ.
ಸವಳಂಗ ಬಳಿ ಇರುವ ಕುರುಚಲು ಕಾಡಿನಲ್ಲಿ ಬೇಟೆಯಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದಾರೆ. ಆಯುಧ ಲೋಡ್ ಮಾಡಿಕೊಂಡು ಕಾಡುಹಂದಿ ಭೇಟೆಗೆ ಹೋಗುತ್ತಿದ್ದ ಇಬ್ಬರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧನ ಬಳಿಕ ಪೊಲೀಸರು ಆರೋಪಿಗಳ ಆಯುಧಗಳನ್ನು ಪರಿಶೀಲನೆ ನಡೆಸುವ ವೇಳೆ ಮಿಸ್ ಫೈರ್ ಆಗಿ ಕಾನ್ಸ್‌ಟೇಬಲ್ ನಾಗರಾಜ್ ಕೈಗೆ ಗಾಯವಾಗಿದೆ. ಭಾರೀ ಅನಾಹುತ ತಪ್ಪಿದೆ. ಈ ಕುರಿತು ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.