ದಾವಣಗೆರೆ: ''ಯಾರು ವಿದ್ಯುತ್ ಬಿಲ್ ಕಟ್ಟಬೇಡಿ, ಯದ್ವಾ ತದ್ವಾ ಬಿಲ್ ಬಂದಿದೆ. ಅದ್ದರಿಂದ ಬಿಲ್ ಪಾವತಿ ಮಾಡ್ಬೇಡಿ'' ಎಂದು ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ವರದಿಗಾರರ ಕೂಟದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ''ನಾನೇ ಜನರಿಗೆ ಹೇಳುತ್ತಾ ಇದ್ದೀನಿ, ಯಾರು ಬಿಲ್ ಪಾವತಿಸಬೇಡಿ. ಪೊಲೀಸರನ್ನು ಕರೆ ತಂದು ಬಿಲ್ ವಸೂಲಿ ಮಾಡಲು ಮುಂದಾದರೆ ನನಗೆ ಫೋನ್ ಮಾಡಿ. ನಮ್ಮ ಅವಧಿಯ 20 ಸಾವಿರ ಕೋಟಿ ರೂಪಾಯಿ ಮೌಲ್ಯದ ಕಾಮಗಾರಿಯನ್ನು ವಾಪಸ್ ತೆಗೆದುಕೊಳ್ಳಲು ಸರ್ಕಾರಕ್ಕೆ ಬರುತ್ತೆ. ಆದರೆ, ವಿದ್ಯುತ್ ಬೆಲೆ ಏರಿಕೆ ಆದೇಶ ವಾಪಸ್ ಪಡೆಯೋಕೆ ಬರಲ್ವಾ, ಕಾಂಗ್ರೆಸ್ ಗ್ಯಾರಂಟಿಗಳಿಗೆ ಸಚಿವರು ದಿನಕ್ಕೊಂದು ಕಂಡಿಷನ್ ಹಾಕುತ್ತಾ ಇದ್ದಾರೆ'' ಎಂದು ಸರ್ಕಾರದ ವಿರುದ್ಧ ಗರಂ ಆದರು.
ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದರಿಂದಲೇ ಅಧಿಕಾರಕ್ಕೆ ಬಂದ ಕಾಂಗ್ರೆಸ್: ಕಾಂಗ್ರೆಸ್ ಅಧಿಕಾರಕ್ಕೆ ಬರೋದಿಲ್ಲ ಎಂದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದರು. ಆದರೆ, ಅದೃಷ್ಟ ಚನ್ನಾಗಿತ್ತು ಅಧಿಕಾರಕ್ಕೆ ಬಂದಿದೆ. ಸರ್ಕಾರ ಒಬ್ಬೊಬ್ಬ ಮಂತ್ರಿ ಒಂದೊಂದು ತರ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಪ್ರಿಯಾಂಕಾ ಖರ್ಗೆ ಅವರು ಸೂಪರ್ ಸಿಎಂ ರೀತಿ ಮಾಡುತ್ತಿದ್ದಾರೆ. ಸಚಿವೆ ನನ್ನ ಸಹೋದರಿ ಲಕ್ಷ್ಮಿ ಹೆಬ್ಬಾಳ್ಕರ್ ದಿನಕ್ಕೊಂದು ಹೇಳಿಕೆ ಕೊಡುತ್ತಾ ಹೋಗುತ್ತಿದ್ದಾರೆ. ಕರೆಂಟ್ ಬಿಲ್ ಜಾಸ್ತಿ ಮಾಡಿದ್ದ ಬಡವರಿಗೆ ಹೊರೆ ಮಾಡಿದ್ದಾರೆ. ಕರೆಂಟ್ ಬಿಲ್ ಅನ್ನು ಬಿಜೆಪಿಯವರು ಮಾಡಿದ್ದಾರೆ ಎಂದು ಸದ್ಯ ಆರೋಪ ಮಾಡುತ್ತಿದ್ದಾರೆ.
ಲಕ್ಷ್ಮಿ ಹೆಬ್ಬಾಳ್ಕರ್ ಗರಂ: ನಮ್ಮ ಸರ್ಕಾರ ಇದ್ದಾಗ 20 ಸಾವಿರ ಕೋಟಿ ಅನುದಾನ ವಾಪಸ್ ಪಡೆದ್ರಲ್ಲ. ಅದರಂತೆ ವಿದ್ಯುತ್ ಬಿಲ್ ಏರಿಕೆಗಳನ್ನು ಕೂಡ ವಾಪಸ್ ಪಡೆಯಬೇಕಿತ್ತು. ಶಕ್ತಿ ಯೋಜನೆಗೆ ಚಾಲನೆ ನೀಡಿದ್ದೀರಿ. ಆದರೆ. ಹಳ್ಳಿಗಾಡುಗಳಲ್ಲಿ ಈವರೆಗೆ ಬಸ್ ಇಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಬಸ್ಗಳನ್ನು ಬಿಟ್ಟಾಗ ಮಾತ್ರ ಮಹಿಳಾ ಸಬಲೀಕರಣ ಆಗಲಿದೆ. ಎಲ್ಲ ಗ್ಯಾರೆಂಟಿಗಳಿಗೆ ಒಳ್ಳೆಯ ಹೆಸರು ಇಟ್ಟಿದ್ದೀರಿ. ನಮ್ಮ ಸಹೋದರಿ ಲಕ್ಷ್ಮೀ ಹೆಬ್ಬಾಳ್ಕರ್ ಬಿಜೆಪಿ ಅಣ್ಣಂದಿರಾ ಸಮಾಧಾನ ಮಾಡಿಕೊಳ್ಳಿ ಎಂದು ಹೇಳ್ತಾ ಇದ್ದಾರೆ. ನೀವು ಅತ್ತೆ- ಸೊಸೆ ನಡುವೆ ಜಗಳ ತಂದಿಟ್ಟಿದ್ದು ಯಾರಮ್ಮ ಎಂದು ಹೆಬ್ಬಾಳ್ಕರ್ ವಿರುದ್ಧ ಕಿಡಿಕಾರಿದರು.
ವಿದ್ಯುತ್ ದರ ಕಡಿಮೆಗೊಳಿಸಲು ಆಗ್ರಹ, ಉಗ್ರ ಹೋರಾಟದ ಎಚ್ಚರಿಕೆ: ಸರ್ಕಾರ ಏಕಾಏಕಿ ವಿದ್ಯುತ್ ದರ ಹೆಚ್ಚು ಮಾಡಿರುವುದಕ್ಕೆ ಕೈಗಾರಿಕೋದ್ಯಮಿಗಳು ಕಿಡಿಕಾರಿದ್ದಾರೆ. ಏಳು ದಿನಗಳ ಒಳಗೆ ಹೆಚ್ಚಿಸಿರುವ ವಿದ್ಯುತ್ ದರ ಕಡಿಮೆಗೊಳಿಸಬೇಕು. ಇಲ್ಲದಿದ್ದರೆ, ಉಗ್ರ ಹೋರಾಟ ಕೈಗೊಳ್ಳಲಾಗುತ್ತದೆ ಎಂದು ಬೆಳಗಾವಿ ಚೇಂಬರ್ ಆಫ್ ಕಾಮರ್ಸ್ ಮಾಜಿ ಅಧ್ಯಕ್ಷ ರೋಹನ್ ಜುವಳಿ ಎಚ್ಚರಿಕೆ ಕೊಟ್ಟಿದ್ದಾರೆ.
ಬೆಳಗಾವಿಯಲ್ಲಿ ಸೋಮವಾರ "ಈಟಿವಿ ಭಾರತ" ಜೊತೆಗೆ ಮಾತನಾಡಿದ ಅವರು, ನಾಳೆ ಬೆಳಗ್ಗೆ ಚನ್ನಮ್ಮ ವೃತ್ತದಿಂದ ಮೌನ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಕೆ ಮಾಡಲಿದ್ದೇವೆ. ನಿಯಮ ಬಾಹಿರವಾಗಿ ಎಫ್ಎಸಿ ಚಾರ್ಜ್ ಹೆಚ್ಚಿಗೆ ಮಾಡಿದ್ದಾರೆ. ಕನಿಷ್ಠ ಶೇಕಡಾ 30ರಿಂದ 65ರಷ್ಟು ಹಳೆ ದರಕ್ಕಿಂತ ಸದ್ಯದ ದರ ಹೆಚ್ಚಳ ಮಾಡಿದ್ದಾರೆ. ಇದರಿಂದ ಕೈಗಾರಿಕೆಗಳಿಗೆ ಬಹಳಷ್ಟು ತೀವ್ರ ಸಂಕಷ್ಟ ಎದುರಾಗಿದೆ ಎಂದು ಗರಂ ಆದರು. ಇಡೀ ರಾಜ್ಯದಲ್ಲೇ ಎರಡನೇ ಅತೀ ದೊಡ್ಡ ರಫ್ತು ಹಾಗೂ ತೆರಿಗೆ ಸಂಗ್ರಹ ಬೆಳಗಾವಿ ಜಿಲ್ಲೆಯಲ್ಲಿ ಆಗುತ್ತಿದೆ ಎಂದು ಅವರು ಇದೇ ವೇಳೆ ಹೇಳಿದರು.
ಇದನ್ನೂ ಓದಿ: Electricity Bill: ಹೊಸ ಮನೆ, ಹೊಸ ಬಾಡಿಗೆದಾರರಿಗೆ ಸರಾಸರಿ ವಿದ್ಯುತ್ ಬಳಕೆ 53 ಯೂನಿಟ್ ಎಂದು ಪರಿಗಣನೆ: ಸಚಿವ ಕೆ ಜೆ ಜಾರ್ಜ್