ದಾವಣಗೆರೆ : ತಾಲೂಕಿನ ನಲ್ಕುಂದ ಗ್ರಾಮದ ಗ್ರಾಮಸ್ಥರು ಆಧುನಿಕ ಯುಗದಲ್ಲೂ ಮೂಢನಂಬಿಕೆ ಮೊರೆ ಹೋಗಿದ್ದಾರೆ. ತೊನ್ನು ಹತ್ತಿದ ಮಹಿಳೆಯ ಶವ ಹೊರತೆಗೆದು ಸುಟ್ಟರೆ ಮಳೆ ಬರುತ್ತೆ ಎಂದು ನಂಬಿ ಮಹಿಳೆ (ಲಕ್ಷ್ಮಿದೇವಿ)ಯ ಶವವನ್ನು ಹೊರತೆಗೆದು ಮರು ಅಂತ್ಯ ಸಂಸ್ಕಾರ ಮಾಡಿ, ಮಹಿಳೆಯ ಕುಟುಂಬಸ್ಥರ ಅನುಮತಿಯಂತೆ ಸುಟ್ಟಿದ್ದಾರೆ. ಆದರೆ ಅದೇನಾಯಿತೋ ಗೊತ್ತಿಲ್ಲ, ಕ್ಷಣಾರ್ಧದಲ್ಲೇ ಇಡೀ ನಲ್ಕುಂದ ಗ್ರಾಮ ರಣರಂಗವಾಗಿ ಮಾರ್ಪಟ್ಟಿದೆ.
ದಾವಣಗೆರೆ ತಾಲೂಕಿನ ನಲ್ಕುಂದ ಗ್ರಾಮದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನ ಜೀವನ ಕಟ್ಟಿಕೊಂಡಿದ್ದಾರೆ. ಗ್ರಾಮದ ಎಲ್ಲಾ ಸಮುದಾಯ, ಧರ್ಮದವರು ಸೇರಿ ಜಾತ್ರೆ, ಹಬ್ಬ ಹರಿದಿನಗಳಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಿದ್ದರು. ಆದರೆ, ಕಳೆದ ರಾತ್ರಿ ನಡೆದ ಕೆಲ ಮನಸ್ತಾಪಗಳಿಂದ ಇಡೀ ಗ್ರಾಮದ ಜನರಲ್ಲಿ ಗಲಾಟೆಯಾಗಿ ಜನರ ನೆಮ್ಮದಿ ಹಾಳಾಗಿದೆ.
ಅಂತ್ಯಸಂಸ್ಕಾರದ ವೇಳೆ ಗಲಾಟೆ : ನಲ್ಕುಂದ ಗ್ರಾಮದಲ್ಲಿ ಒಂದು ತಿಂಗಳ ಹಿಂದೆ ತೊನ್ನು ಹತ್ತಿದ ಮಹಿಳೆ ಸಾವನ್ನಪ್ಪಿದ್ದರಿಂದ ಅವರನ್ನು ಹೂತು ಹಾಕಿದ್ದರು. ಆದ್ದರಿಂದ ನಮ್ಮ ಭಾಗದಲ್ಲಿ ಮಳೆಯಾಗುತ್ತಿಲ್ಲ. ಬೆಳೆ ಒಣಗುತ್ತಿವೆ ಎಂದು ಹೇಳಿ ಆಕೆಯ ಶವವನ್ನು ಹೊರ ತೆಗೆದು ಸುಡಲು ಇಡೀ ಗ್ರಾಮದ ಜನರು ತೀರ್ಮಾನಿಸಿದ್ದರು. ಅಲ್ಲದೆ ಗ್ರಾಮದ ದೇವರ ಅಪ್ಪಣೆಯನ್ನು ಕೂಡ ತೆಗೆದುಕೊಂಡಿದ್ದರು. ಮಹಿಳೆಯ ಅಂತ್ಯಸಂಸ್ಕಾರದ ಕಾರ್ಯವನ್ನು (ಶನಿವಾರ) ಮಾಡುವಾಗ ಇಬ್ಬರ ನಡುವೆ ಜಗಳವಾಗಿದೆ. ಇದು ದೊಡ್ಡದಾಗಿ ಎರಡು ಸಮುದಾಯಗಳ ನಡುವಿನ ಜಗಳಕ್ಕೆ ಕಾರಣವಾಗಿದೆ ಎಂದು ಗ್ರಾಮದ ಮುಖಂಡ ರಂಗಸ್ವಾಮಿ ತಿಳಿಸಿದ್ದಾರೆ.
ಎಲ್ಲಾ ಗ್ರಾಮಸ್ಥರು ಆ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಬಂದಿದ್ದಾರೆ. ಆದರೆ ಇಬ್ಬರಿಂದ ಶುರುವಾದ ಜಗಳ ಎರಡು ಸಮುದಾಯದ ಜನರ ನಡುವೆ ಜಗಳಕ್ಕೆ ಕಾರಣವಾಗಿದೆ. ಪರಿಣಾಮ ನೂರಾರು ಜನರು ಹೊಡೆದಾಡಿಕೊಂಡಿದ್ದಾರೆ. ನಲ್ಕುಂದ ಗ್ರಾಮದವರು ಅಲ್ಲದೆ ಬೇರೆ ಗ್ರಾಮದ ಯುವಕರು ಕೂಡ ಬಂದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಕೂಡಲೇ ಎಸ್ಪಿ ಉಮಾ ಪ್ರಶಾಂತ್ ಆ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಹಲ್ಲೆ ನಡೆಸಿದ ಎರಡು ಸಮುದಾಯದ ಒಟ್ಟು 28 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ನೂರಕ್ಕೂ ಹೆಚ್ಚು ಜನ ಪೊಲೀಸರು ಗ್ರಾಮದಲ್ಲಿ ಮೊಕ್ಕಾಂ ಹೂಡಿ ಮುನ್ನೆಚ್ಚರಿಕೆ ವಹಿಸಿದ್ದಾರೆ.
ಈ ವೇಳೆ ದೇವೆಂದ್ರಪ್ಪ ಎಂಬುವರು ಮಾತನಾಡಿ "ಹಬ್ಬ ಹರಿದಿನಗಳಲ್ಲಿ ಎರಡು ಸಮುದಾಯದವರು ಸೇರಿ ಹಬ್ಬ ಆಚರಣೆ ಮಾಡ್ತಿದ್ದೇವೆ. ಕಳೆದ ದಿನ ಗ್ರಾಮದಲ್ಲಿ ಮಳೆ ಆಗಿಲ್ಲ ಎಂದು ಕಾರ್ಯ ಮಾಡಿದ್ದು, ಅದು ಮೂಢನಂಬಿಕೆ ಇರಬಹುದು. ಆದ್ರೆ ದೇವರ ನಂಬಿಕೆ ನಮ್ಮೂರಲ್ಲಿ ಇದೆ. ತೊನ್ನು ಹತ್ತಿದ ಶವ ಹೊರತೆಗೆದು ಸುಟ್ಟು, ಕಾರ್ಯ ಮುಗಿಸಿಕೊಂಡು ಬಂದ ಬಳಿಕ ಈ ಗಲಾಟೆ ಆಗಿದೆ. ರಾಜಕೀಯ ಪ್ರಾಬಲ್ಯ ಹಾಗೂ ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಹೊರ ಗ್ರಾಮದವರು ನಮ್ಮ ಊರಿನಲ್ಲಿ ತಡರಾತ್ರಿ ಗಲಾಟೆ ಮಾಡಿಕೊಂಡಿದ್ದಾರೆ. ಪೊಲೀಸರು ಹಾಜರಾಗಿ ಕೆಲವರನ್ನು ಬಂಧಿಸಿದ್ದಾರೆ. ಹೊರ ಗ್ರಾಮದವರು ನಲ್ಕುಂದಕ್ಕೆ ಆಗಮಿಸಿ ಪೊಲೀಸರ ಸಮ್ಮುಖದಲ್ಲೇ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಹಿಂದೆ ಈ ರೀತಿ ಆಗಿಲ್ಲ. ಮುಂದೆನೂ ಆಗ್ಬಾರದು ಎಂದು ದೇವೆಂದ್ರಪ್ಪ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಾಯಕೊಂಡ ಠಾಣೆಯಲ್ಲಿ ವಿವಿಧ ಸೆಕ್ಷನ್ಗಳಡಿ ಎರಡು ಕೇಸ್ ದಾಖಲಾಗಿವೆ.
ಇದನ್ನೂ ಓದಿ: ಮಾಟಮಂತ್ರ - ಮೂಢನಂಬಿಕೆ: ಸಮುದಾಯ ಸಭೆಯಲ್ಲಿ ಉರುಳಿ ಬಿದ್ದವು ತಂದೆ, ಇಬ್ಬರು ಮಕ್ಕಳ ಹೆಣ!