ದಾವಣಗೆರೆ: ನಗರದಲ್ಲಿ ದಿನೇ ದಿನೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನರು ದೇವರ ಮೊರೆ ಹೋಗುತ್ತಿದ್ದಾರೆ. ಮಹಾಮಾರಿ ಕೊರೊನಾದಿಂದ ರಕ್ಷಿಸು ಅಂತಾ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.
ನಗರದ ಗಾಂಧಿನಗರದ ಬಳಿ ಇರುವ ಮೈಲಮ್ಮ ದೇವಿಗೆ ಸ್ಥಳೀಯರು ವಿಶೇಷ ಪೂಜೆ ಸಲ್ಲಿಸಿದರು. ಮಹಿಳೆಯರು ಮನೆಯಲ್ಲಿಯೇ ಹೋಳಿಗೆ ತಯಾರಿಸಿ ದೇವಸ್ಥಾನಕ್ಕೆ ತಂದು ದೇಗುಲದ ಹೊರಗಡೆ ಇಟ್ಟು ವಿಶೇಷ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಹೋಳಿಗೆ ಎಡೆ ಮಾಡಿ ದೇವಿಯ ಆವರಣದಲ್ಲಿಟ್ಟು ಪೂಜೆ ಸಲ್ಲಿಸಿದರೆ ಒಳಿತಾಗುತ್ತೆ ಎಂಬ ನಂಬಿಕೆ ಈ ತಾಣದಲ್ಲಿ ಮೊದಲಿನಿಂದಲೂ ಇದೆ. ಈ ಹಿನ್ನೆಲೆಯಲ್ಲಿ ದೇಗುಲದಲ್ಲಿ ಹೋಳಿಗೆ ಎಡೆ ಮಾಡಿ ಕೊರೊನಾ ಹಾವಳಿ ನಿಲ್ಲಿಸು ತಾಯಿ ಅಂತಾ ಹರಕೆ ಹೊತ್ತುಕೊಂಡಿದ್ದಾರೆ.
ನಗರದ ಬಾಷಾನಗರ, ಇಮಾಮ್ ನಗರ, ಜಾಲಿನಗರದಲ್ಲಿ ಕೊರೊನಾ ಸಂಖ್ಯೆ ಹೆಚ್ಚಳ ಆಗುತ್ತಿದೆ. ಇದಕ್ಕೆ ಕಡಿವಾಣ ಹಾಕು ತಾಯಿ ಅಂತಾ ಪ್ರಾರ್ಥಿಸಿ ವಿಶೇಷ ಪೂಜೆ ನೆರವೇರಿಸಿದರು.