ಹರಿಹರ: ತಾಲೂಕಿನ ಗಂಗನರಸಿ ಗ್ರಾಮಕ್ಕೆ ಹೊರಿಗಿನಿಂದ ಯಾರೂ ಪ್ರವೇಶಿಸದಂತೆ ಮುಳ್ಳಿನ ಬೇಲಿ ಹಾಕುವುದರ ಮೂಲಕ ಗ್ರಾಮದ ಪ್ರಮುಖರು ಸ್ವಯಂ ಪ್ರೇರಿತವಾಗಿ ದಿಗ್ಬಂಧನ ಹಾಕಿಕೊಂಡಿದ್ದಾರೆ.
ಗ್ರಾಮಸ್ಥರು ಮಾಹಾಮಾರಿ ಕೊರೋನಾ ವೈರಸ್ ಹರಡದಂತೆ ತಡೆಯಲು ಶುಕ್ರವಾರ ಬೆಳಿಗ್ಗೆ ಗ್ರಾಮಕ್ಕೆ ಬರುವ ನಾಲ್ಕು ದಿಕ್ಕುಗಳ ಪ್ರಮುಖ ರಸ್ತೆಗಳಿಗೆ ಜಾಲಿ ಮುಳ್ಳಿನ ಬೇಲಿಯನ್ನು ಹಾಕಿ ಬಂದ್ ಮಾಡಿದರು.
ಗ್ರಾಮದ ಮುಖಂಡರು ದೇವಸ್ಥಾನದ ಆವರಣದಲ್ಲಿ ಸಭೆ ನಡೆಸಿ, ಗ್ರಾಮಕ್ಕೆ ಕೂಡುವ ಎಲ್ಲಾ ರಸ್ತೆ ಬಂದ್ ಮಾಡುವ ಮೂಲಕ ಗ್ರಾಮಕ್ಕೆ ಅನ್ಯರ ಪ್ರವೇಶದಿಂದ ಆಗುವ ಅನಾಹುತ ತಪ್ಪಿಸಲು ರಸ್ತೆಗೆ ಬೆಲಿ ಹಾಕುವುದು ಒಳಿತು ಎಂದು ತಿರ್ಮಾನಿಸಿದ್ದಾರೆ.
ಅದರಂತೆ ಗ್ರಾಮದ ಯುವಕರ ತಂಡವು ಜಾಲಿ ಮುಳ್ಳಿನ ಕಂಟಿಗಳನ್ನು ತಂದು ನಾಲ್ಕು ದಿಕ್ಕಿನ ರಸ್ತೆಗಳಿಗೆ ಹಾಕುವ ಮೂಲಕ ಹೊರಗಿನಿಂದ ಯಾರೂ ಗ್ರಾಮಕ್ಕೆ ಪ್ರವೇಶಿಸದಂತೆ ಸ್ವಯಂ ನಿರ್ಬಂಧ ಹೇರಿಕೊಂಡರು.
ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಾಂತರ ಠಾಣೆಯ ಪಿಎಸ್‌ಐ ಡಿ.ರವಿಕುಮಾರ್ ಗ್ರಾಮಕ್ಕೆ ಆಗಮಿಸಿ ಸ್ವಯಂ ನಿರ್ಬಂಧ ಹೇರಿರುವುದು ಸೂಕ್ತ. ಆದರೆ ಗ್ರಾಮದಲ್ಲಿ ಏನಾದರೂ ತೊಂದರೆಯಾದರೆ ಆಸ್ಪತ್ರೆಗೆ ತೆರಳಲು ವಾಹನಗಳ ಸಂಚಾರಕ್ಕೆ ಅಡ್ಡಿಯಾಗುವುದರಿಂದ ಶಿವಮೊಗ್ಗ - ಹೊಸಪೇಟೆ ರಸ್ತೆಗೆ ಹೊಂದಿಕೊಂಡಿರುವ ಗ್ರಾಮದ ರಸ್ತೆಗೆ ಹಾಕಿರುವ ಬೇಲಿಯನ್ನು ತೆರವುಗೊಳಿಸುವಂತೆ ಮನವರಿಕೆ ಮಾಡಿದರು. ನಂತರ ಗ್ರಾಮಸ್ಥರು ಒಂದು ರಸ್ತೆಯ ಬೇಲಿಯನ್ನು ತೆರವುಗೊಳಿಸಿದ್ದಾರೆ.