ದಾವಣಗೆರೆ: ಕಬ್ಬಿನ ಎಫ್ಆರ್ಪಿ ದರ ನಿಗದಿಯಲ್ಲಿ ರೈತರಿಗೆ ದ್ರೋಹ ಬಗೆದಿರುವ ಕೇಂದ್ರ ಸರ್ಕಾರದ ನೀತಿಯ ವಿರುದ್ಧ ರೈತರು ಕೆಂಡಕಾರಿದ್ದಾರೆ. ಜೊತೆಗೆ 2022ರ ವಿದ್ಯುತ್ ಕಾಯ್ದೆ ಖಾಸಗೀಕರಣ ತಿದ್ದುಪಡಿಗೆ ಕೇಂದ್ರ ತೆರೆಮರೆಯಲ್ಲಿ ಸಿದ್ಧತೆ ನಡೆಸುತ್ತಿರುವುದರಿಂದ ಸರ್ಕಾರಗಳ ವಿರುದ್ಧ ಕೆರಳಿರುವ ರಾಜ್ಯದ ರೈತರು ಸೆ. 26 ಕ್ಕೆ ವಿಧಾನಸೌಧ ಚಲೋ ಹೋರಾಟಕ್ಕೆ ಮುಂದಾಗಿದ್ದಾರೆ.
ಕೇಂದ್ರ ಸರ್ಕಾರ ಈ ಹಿಂದೆ ರೈತ ವಿರೋಧಿ ಮೂರು ಕೃಷಿ ಕಾಯ್ದೆಯನ್ನು ಜಾರಿಗೆ ತಂದಿತ್ತು. ಇದನ್ನು ವಿರೋಧಿಸಿ ದೆಹಲಿಯಲ್ಲಿ 1 ವರ್ಷ 4 ತಿಂಗಳು ಸುದೀರ್ಘ ಪ್ರತಿಭಟನೆ ನಡೆಸಿದ ಪರಿಣಾಮ ಆ ಮಸೂದೆಗಳನ್ನ ವಾಪಸ್ ಪಡೆಯುವಂತೆ ಮಾಡುವಲ್ಲಿ ದೇಶದ ರೈತರು ಯಶಸ್ವಿಯಾಗಿದ್ದರು. ಅದ್ರೆ, ಇದೀಗ ಮತ್ತೆ ಕೇಂದ್ರ ಸರ್ಕಾರ ವಿದ್ಯುತ್ ಖಾಸಗೀಕರಣ ಕಾಯ್ದೆ ಜಾರಿಗೆ ಮುಂದಾಗಿದ್ದರಿಂದ ದಾವಣಗೆರೆ ಸೇರಿದಂತೆ ರಾಜ್ಯಾದ್ಯಂತ ರೈತರು, ಜನಸಾಮಾನ್ಯರಿಂದ ಭಾರಿ ವಿರೋಧ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ಕಬ್ಬು ಬೆಳೆಗಾರರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹ: ಸಿಎಂ ಮನೆಗೆ ಮುತ್ತಿಗೆ ಯತ್ನ
ಇದೀಗ ಲೋಕಸಭೆಯಲ್ಲಿ ತಿದ್ದುಪಡಿ ಮಾಡುವ ಮೂಲಕ ಮಸೂದೆಯನ್ನು ಮಂಡಿಸಿ, ಸ್ಥಾಯಿ ಸಮಿತಿಗೆ ಒಪ್ಪಿಸಿ ಮತ್ತೆ ಈ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿರುವುದು ಅನ್ನದಾತನ ಆಕ್ರೋಶಕ್ಕೆ ಕಾರಣವಾಗಿದೆ. ಕಾಯ್ದೆ ವಿರೋಧಿಸಿ ದಾವಣಗೆರೆಯಲ್ಲಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ವತಿಯಿಂದ ರೈತರು ಪ್ರತಿಭಟನೆ ಮಾಡಿದ್ದಾರೆ. ಇದಲ್ಲದೇ, ಕಬ್ಬಿನ ಎಫ್ಆರ್ಪಿ ದರ ನಿಗದಿಯಲ್ಲಿ ರೈತರಿಗೆ ದ್ರೋಹ ಬಗೆದಿರುವ ಕೇಂದ್ರ ಸರ್ಕಾರದ ನೀತಿಯ ವಿರುದ್ಧ ರಾಜ್ಯ ಕಬ್ಬು ಬೆಳೆಗಾರರ ಸಂಘ ಸೆ. 26 ಕ್ಕೆ ವಿಧಾನಸೌಧ ಚಲೋ ಹೋರಾಟಕ್ಕೆ ಸಜ್ಜಾಗುತ್ತಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ವಿದ್ಯುತ್ ಕಾಯ್ದೆ ತಿದ್ದುಪಡಿಗೆ ವಿರೋಧ.. ಉತ್ತರಕನ್ನಡದ ವಿವಿಧೆಡೆ ನೌಕರರ ಪ್ರತಿಭಟನೆ
ವಿದ್ಯುತ್ ಖಾಸಗೀಕರಣಕ್ಕೆ ವಿರೋಧ: ಈ ಮಸೂದೆ ತಿದ್ದುಪಡಿಯಲ್ಲಿ ವಿದ್ಯುತ್ ಪೂರೈಕೆ ಉಪಗುತ್ತಿಗೆ ಹಾಗೂ ಪ್ರಾಂಚೈಸಿಗೆ ಅವಕಾಶವಿದೆಯಂತೆ. ಈ ಮೂಲಕ ವಿದ್ಯುತ್ ವಿತರಣಾ ಕಂಪನಿಗಳನ್ನು ಖಾಸಗೀಕರಣ ಮಾಡುವುದೇ ತಿದ್ದುಪಡಿಯ ಉದ್ದೇಶವಾಗಿದೆ. ಈ ಮಸೂದೆಯ ತಿದ್ದುಪಡಿ ರೈತರಿಗೆ, ಗ್ರಾಹಕರಿಗೆ ಮರಣ ಶಾಸನವಾಗಲಿದೆ. ವಿದ್ಯುತ್ ಪೂರೈಕೆ ಖಾಸಗೀಕರಣಗೊಂಡರೆ ರೈತರು, ಕೂಲಿ ಕಾರ್ಮಿಕರಿಗೆ, ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಕೃಷಿ ಪಂಪ್‌ಸೆಟ್, ಬೀದಿ ದೀಪ, ನೀರು ಸರಬರಾಜಿಗೆ ನೀಡುತ್ತಿರುವ ಉಚಿತ ವಿದ್ಯುತ್ ಬಂದ್ ಆಗಲಿದೆ. ಗ್ರಾಹಕರು ಮೊದಲು ವಿದ್ಯುತ್ ಶುಲ್ಕ ಪಾವತಿಸಿ ಬಳಿಕ ಸರ್ಕಾರದ ಸಬ್ಸಿಡಿ ಕಾರ್ಯಕ್ರಮದಡಿಯಲ್ಲಿ ಪರಿಹಾರ ನೀಡಿದರೆ ಪಡೆಯಬೇಕಾಗುತ್ತದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಹೆದ್ದಾರಿಯಲ್ಲಿ ಕುಳಿತು ರಕ್ತದಾನ, ಕಡ್ಲೆ ತಿಂದು ವಿಭಿನ್ನವಾಗಿ ಪ್ರತಿಭಟಿಸಿದ ಕಬ್ಬು ಬೆಳೆಗಾರರು
ಕಬ್ಬು ಬೆಳೆಗಾರರ ಬೇಡಿಕೆಗಳೇನು: ಎಲ್ಲಾ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ MSP ಕಾತರಿ ಕಾನೂನು ಜಾರಿಗೆ ತಂದು ಡಾ. ಸ್ವಾಮಿನಾಥನ್ ವರದಿಯಂತೆ ಬೆಂಬಲ ಬೆಲೆ ನಿಗದಿಯಾಗಬೇಕು, ಕೃಷಿ ಉತ್ಪನ್ನಗಳ ಹಾಗೂ ಉಪಕರಣಗಳ ಮೇಲಿನ ಜಿಎಸ್ಟಿ ರದ್ದುಪಡಿಸಬೇಕು, ದೇಶದಲ್ಲಿ ಮೂರುವರೆ ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಹಾಗೂ ಕೊರೊನಾ ಲಾಕ್ಡೌನ್, ಅತಿವೃಷ್ಟಿ, ಮಳೆ ಹಾನಿ ಸಂಕಷ್ಟದಿಂದ ನಲುಗಿದ್ದಾರೆ. ಹಾಗಾಗಿ ದೇಶದ ಉದ್ಯಮಿಗಳ 10 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ ರೀತಿಯಲ್ಲಿ ರೈತರ ಸಾಲ ಮನ್ನಾ ಮಾಡಬೇಕು, ಫಸಲ್ ಭೀಮಾ ಬೆಳೆವಿಮೆ ಯೋಜನೆ ಮಾನದಂಡ ಬದಲಾಯಿಸಬೇಕು. 440 ರೂಪಾಯಿ ವಿಮೆ ಕಟ್ಟಿದ್ದ ರೈತನಿಗೆ 160 ರೂ. ಮೆಕ್ಕೆಜೋಳದ ಪರಿಹಾರ ಬಂದಿದೆ. ಇದು ರೈತರಿಗೆ ಟೋಪಿ ಹಾಕುವ ವಿಮೆ ಯೋಜನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.