ದಾವಣಗೆರೆ : ಬೆಣ್ಣೆದೋಸೆ ಎಂದರೆ ತಕ್ಷಣ ನೆನಪಾಗೋದು ದಾವಣಗೆರೆ. ಇಲ್ಲಿನ ಗರಿ ಗರಿಯಾದ ಬೆಣ್ಣೆದೋಸೆಗೆ ಮನಸೋಲದವರೇ ಇಲ್ಲ. ರಾಜಕಾರಣಿಗಳಿಂದ ಹಿಡಿದು, ಸಿನಿಮಾ ನಟರ ತನಕ ಎಲ್ಲರಿಗೂ ದಾವಣಗೆರೆಯ ಬೆಣ್ಣೆದೋಸೆ ಅಂದರೆ ಅಚ್ಚುಮೆಚ್ಚು. ದಾವಣಗೆರೆಯತ್ತ ಬಂದವರು ಬೆಣ್ಣೆದೋಸೆ ಸವಿಯದೆ ಹೋಗುವುದು ಕಡಿಮೆ. ಆದ್ದರಿಂದಲೇ ದಾವಣಗೆರೆಗೆ ಬೆಣ್ಣೆ ನಗರಿ ಎಂಬ ಹೆಸರು ಬಂದಿದೆ.
ಜಿಲ್ಲೆಯಲ್ಲಿ ಎಲ್ಲಿ ಹೋದರೂ ಬೆಣ್ಣೆದೋಸೆ ಸಿಗುತ್ತದೆ. ಆದರೆ, ನಗರದ ಗುಂಡಿ ವೃತ್ತದಲ್ಲಿರುವ ಕೊಟ್ಟೂರೇಶ್ವರ ಹೋಟೆಲ್ನಲ್ಲಿ ದೊರೆಯುವ ಬೆಣ್ಣೆದೋಸೆ ಮಾತ್ರ ತುಂಬಾ ಸ್ಪೆಷಲ್. ಇಲ್ಲಿನ ಬೆಣ್ಣೆದೋಸೆ ಹಾಗೂ ಖಾಲಿ ದೋಸೆ ಸವಿಯಲು ವಿವಿಧೆಡೆಗಳಿಂದ ಜನ ಆಗಮಿಸುತ್ತಾರೆ.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಸಂಸದ ಜಿ.ಎಂ. ಸಿದ್ದೇಶ್ವರ್, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಕುಟುಂಬದವರಿಗೂ ಕೊಟ್ಟೂರೇಶ್ವರ ಹೋಟೆಲ್ನ ಬೆಣ್ಣೆದೋಸೆ ಫೆವರೇಟ್. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ದಾವಣಗೆರೆಗೆ ಆಗಮಿಸಿದರೆ, ಕೊಟ್ಟೂರೇಶ್ವರ ಹೋಟೆಲ್ನಲ್ಲಿ ಬೆಣ್ಣೆದೋಸೆ ಸವಿಯದೆ ಮುಂದೆ ತೆರಳುವುದಿಲ್ಲ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಚಿವ ಕೆ.ಎಸ್. ಈಶ್ವರಪ್ಪ, ಎಸ್.ಎಸ್. ಮಲ್ಲಿಕಾರ್ಜುನ್, ಸಿನಿಮಾ ನಟರಾದ ಗೋಲ್ಡನ್ ಸ್ಟಾರ್ ಗಣೇಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಕೂಡ ಇಲ್ಲಿನ ಬೆಣ್ಣೆದೋಸೆ ಸವಿಯಲು ಬರುತ್ತಾರೆ.
ಸುಮಾರು ಮೂವತ್ತು ವರ್ಷಗಳಿಂದ ಹೋಟೆಲ್ ನಡೆಸುತ್ತಿದ್ದು, ನಮ್ಮ ಹೋಟೆಲ್ನ ಬೆಣ್ಣೆದೋಸೆಯ ರುಚಿ ಸವಿಯಲು ವಿವಿಧೆಡೆಗಳಿಂದ ಜನ ಬರುತ್ತಾರೆ. ಅದರಲ್ಲೂ ವೀಕೆಂಡ್ನಲ್ಲಿ ಬೆಣ್ಣೆದೋಸೆಗೆ ಹೆಚ್ಚಿನ ಬೇಡಿಕೆ ಇರುತ್ತದೆ ಎಂದು ಕೊಟ್ಟೂರೇಶ್ವರ ಹೋಟೆಲ್ ಮಾಲೀಕ ನರೇಂದ್ರ ಹೇಳಿದ್ದಾರೆ.