ದಾವಣಗೆರೆ : ವೇದ, ವಚನ ಮತ್ತು ಸೂಫಿ ಪರಂಪರೆಯಿಂದಲೇ ಕರ್ನಾಟಕದ ಕಬೀರ ಎಂದೇ ಖ್ಯಾತಿ ಗಳಿಸಿ ಪದ್ಮಶ್ರೀ ಪುರಸ್ಕೃತರಾಗಿದ್ದ ಲಿಂಗೈಕ್ಯ ಇಬ್ರಾಹಿಂ ಸುತಾರ ಅವರಿಗೂ ದಾವಣಗೆರೆ ಜಿಲ್ಲೆಗೆ ಬಹಳ ನಂಟಿದೆ.
ಭಾವೈಕ್ಯತೆಯ ಸಂದೇಶ ಸಾರುತ್ತಿದ್ದ ಇಬ್ರಾಹಿಂ ಸುತಾರ ಅವರು ನಮ್ಮನಗಲಿದ್ದು, ಭರಿಸಲಾದ ನಷ್ಟ ಆಗಿದೆ. ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರರವರಿಗೂ ಮತ್ತು ದಾವಣಗೆರೆ ಜಿಲ್ಲೆಯ ಹರಿಹರ ಪಂಚಮಸಾಲಿ ಮಠಕ್ಕೂ ಎಲ್ಲಿಲ್ಲದ ನಂಟು ಇತ್ತು.
ಪಂಚಮಸಾಲಿ ಮಠದ ಆವರಣದಲ್ಲಿ 2019ರಲ್ಲಿ ನಡೆದಂತಹ ಯೋಗರತ್ನ ಸಂಭ್ರಮ ಕಾರ್ಯಕ್ರಮದಲ್ಲಿ ಆತ್ಮೀಯತೆಯಿಂದ ಭಾಗವಹಿಸಿದ್ದರು. ವಚನಾನಂದ ಶ್ರೀಯವರು ಹರಿಹರ ಲಿಂಗಾಯತ ವೀರಶೈವ ಪಂಚಮಸಾಲಿ ಜಗದ್ಗುರು ಪೀಠದ ಪೀಠಾಧ್ಯಕ್ಷರಾದ ನಂತರ ಹರಕ್ಷೇತ್ರಕ್ಕೂ ಭೇಟಿ ನೀಡಿದ್ದ ಅವರು, ತಮ್ಮ ಅಪಾರವಾದ ಜ್ಞಾನವನ್ನ ಹಂಚಿಕೊಂಡಿದ್ದರು ಎಂದು ವಚನಾನಂದ ಶ್ರೀ ನೆನಪು ಮೆಲುಕು ಹಾಕಿದ್ದಾರೆ.
ತಮ್ಮ ಭಜನೆ ಹಾಗೂ ಪ್ರವಚನಗಳಿಂದ ಸಮಾಜದಲ್ಲಿ ಭಾವೈಕ್ಯತೆಯ ಬೆಳಕನ್ನ ಬಿತ್ತುತ್ತಿದ್ದ ಅವರು ಮಹಾಬೆಳಕಿನಲ್ಲಿ ಲೀನವಾಗಿದ್ದಾರೆ. ಪದ್ಮಶ್ರೀ ಪ್ರಶಸ್ತಿಗೆ ಪುರಸ್ಕೃತರಾಗಿದ್ದ ಅವರು ಹಾಕಿ ಕೊಟ್ಟಂತಹ ಭಾವೈಕ್ಯತೆಯ ಬೆಳಕಿನ ದಾರಿ ನಮಗೂ ಪ್ರೇರಣೆಯಾಗಿರಲಿದೆ ಎಂದು ವಚನಾನಂದ ಶ್ರೀ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಸಂತಾಪ ಸೂಚಿಸಿದ್ದಾರೆ.
ವ್ಯಕ್ತಿತ್ವದಲ್ಲಿ ಘನತೆಯನ್ನು ಹೊಂದಿದ್ದ ಅವರು ಸಮಾಜದಲ್ಲಿ ಭಾವೈಕ್ಯತೆಯನ್ನು ಬಿತ್ತುವ ರಾಜ್ಯದ ಪ್ರಮುಖರಾಗಿದ್ದರು. ವೇದ, ವಚನ ಮತ್ತು ಸೂಫಿ ಪರಂಪರೆಯ ಬಗ್ಗೆ ಅವರಿಗಿದ್ದ ಜ್ಞಾನ ನಮ್ಮಲ್ಲಿ ಬೆರಗನ್ನು ಹುಟ್ಟಿಸುತ್ತಿದ್ದ ಜೀವ ನಮ್ಮೊಂದಿಗಿಲ್ಲ ಎಂಬುದು ಬೇಸರದ ಸಂಗತಿ ಎಂದು ಬರೆದುಕೊಂಡಿದ್ದಾರೆ.