ದಾವಣಗೆರೆ: ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಮುಂದಾದ ಶಾಸಕರ ವಿರುದ್ಧ ಕುಮಾರಸ್ವಾಮಿ ಅವರ ಅಭಿಮಾನಿಯೊಬ್ಬ ದೇವರ ಮೊರೆ ಹೋಗಿದ್ದಾನೆ. ಸರ್ಕಾರಕ್ಕೆ ತೊಂದರೆ ಆಗಬಾರದು ಎಂದು ದಾವಣಗೆರೆಯಲ್ಲಿ ಅಭಿಮಾನಿ ಉರುಳು ಸೇವೆ ಮಾಡಿ ಸರ್ಕಾರ ಸೇಫ್ ಆಗಿರಲಿ ಎಂದು ದೇವರಲ್ಲಿ ಬೇಡಿಕೊಂಡಿದ್ದಾನೆ.
ಜೆಡಿಎಸ್ ಕಾರ್ಯಕರ್ತ ಎ.ಶ್ರೀನಿವಾಸ್ ನಗರದ ದುರ್ಗಾಂಬಿಕ ದೇವಸ್ಥಾನದಲ್ಲಿ ಉರುಳು ಸೇವೆ ಮಾಡಿ ಸರ್ಕಾರಕ್ಕೆ ಯಾವ ತೊಂದರೆ ಆಗಬಾದೆಂದು ಬೇಡಿಕೊಂಡಿದ್ದಾರೆ. ಸರಳ, ಸಜ್ಜನಿಕೆಯ, ಬಡವರ ಪರ ಕಾಳಜಿ ಇರುವ ಕುಮಾರಸ್ವಾಮಿ ಅವರೇ ಸಿಎಂ ಆಗಿ ಮುಂದುವರೆಯಬೇಕೆಂದು ಉರುಳು ಸೇವೆ ಮಾಡಿರುವೆ ಎಂದು ಶ್ರೀನಿವಾಸ್ ತಿಳಿಸಿದ್ದಾರೆ. ಈ ವೇಳೆ ಎ.ಶ್ರೀನಿವಾಸ್ಗೆ ಜೆಡಿಎಸ್ ಮುಖಂಡರು ಸಾಥ್ ನೀಡಿದರು.
ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರ ಸುಭದ್ರವಾಗಿರಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದು ಜೆಡಿಎಸ್ ಮುಖಂಡ ಅಮಾನುಲ್ಲಾಖಾನ್ ಹೇಳಿದರು.
ಬಿಜೆಪಿ ಪ್ರತಿಭಟನೆ:
ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ದಾವಣಗೆರೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಗರದ ಬಿಜೆಪಿ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಒಂದು ವರ್ಷದಿಂದ ಮೈತ್ರಿಕೂಟ ಆಡಳಿತ ನಡೆಸುತ್ತಿದೆ. ಆದರೆ ರಾಜ್ಯದಲ್ಲಿ ಯಾವುದೇ ಜನಪರ ಕಾಳಜಿಯುಳ್ಳ ಕಾರ್ಯಗಳು ನಡೆದಿಲ್ಲ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕಳೆದ 4 ದಿನಗಳಿಂದ ದೋಸ್ತಿ ಸರ್ಕಾರದ ಶಾಸಕರು, ಸಚಿವರು ರಾಜೀನಾಮೆ ನೀಡುತ್ತಿದ್ದಾರೆ. ಈ ಹಿನ್ನೆಲೆ ರಾಜ್ಯ ಸರ್ಕಾರ ಅಲ್ಪ ಮತಕ್ಕೆ ಕುಸಿದಿದೆ. ಆದ್ದರಿಂದ ಘನವೆತ್ತ ರಾಜ್ಯಪಾಲರು ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.