ದಾವಣಗೆರೆ: ಸ್ನಾನ ಮಾಡಲೆಂದು ನದಿಗಿಳಿದ ಸಹೋದರಿಯರಿಬ್ಬರು ನೀರು ಪಾಲಾಗಿರುವ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಶ್ರೀ ಕ್ಷೇತ್ರ ಉಕ್ಕಡಗಾತ್ರಿಯ ಬಳಿ ಹರಿಯುವ ತುಂಗಾಭದ್ರಾ ನದಿಯಲ್ಲಿ ನಡೆದಿದೆ. ಇಬ್ಬರು ಸಹೋದರಿಯರು ಮುಳುಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿಯ ಹುಚ್ಚವ್ವನಹಳ್ಳಿ ಗ್ರಾಮದ ವೀರಾಚಾರಿ ಅವರ ಪುತ್ರಿಯರಾದ ಚೈತ್ರಾ(19), ಪುಷ್ಪಾ(17) ಮೃತರು. ಭಾನುವಾರ ಕುಟುಂಬಸಮೇತ ಮಲೇಬೆನ್ನೂರು ಸಮೀಪದ ಉಕ್ಕಡಗಾತ್ರಿಗೆ ಕರಿಬಸವೇಶ್ವರ ಸ್ವಾಮಿಯ ದರ್ಶನಕ್ಕೆ ಆಗಮಿಸಿ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದರು. ಈ ವೇಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ನೋಡು ನೋಡುತ್ತಿದ್ದಂತೆಯೇ ಸಹೋದರಿಯರು ನೀರಿನ ರಭಸಕ್ಕೆ ಸಿಲುಕಿ ಕಣ್ಮರೆಯಾಗುತ್ತಿದ್ದಾಗ ಕುಟುಂಬದ ಸದಸ್ಯರು ಸಹಾಯಕ್ಕೆ ಧಾವಿಸಿದ್ದಾರೆ. ಆದ್ರೆ ಪ್ರಯತ್ನ ಫಲ ನೀಡಲಿಲ್ಲ.
ಚೈತ್ರಾ ಅವರನ್ನು ಹೊಳಲ್ಕೆರೆ ತಾಲ್ಲೂಕಿನ ಗುಂಡೇರಿ ಗ್ರಾಮದ ಕಾರ್ತಿಕ್ ಜೊತೆ ವಿವಾಹ ಮಾಡಿಕೊಡಲಾಗಿತ್ತು. ಪುಷ್ಪಾ ದಾವಣಗೆರೆಯ ಕಾಲೇಜೊಂದರಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು.
ತಹಶೀಲ್ದಾರ್ ಡಾ.ಎಂ.ಬಿ.ಅಶ್ವತ್ಥ, ಪಿಎಸ್‌ಐ ರವಿಕುಮಾರ್ ಸ್ಥಳದಲ್ಲಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಶೋಧಕಾರ್ಯ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಬಳ್ಳಾರಿಯಲ್ಲಿ ಈಜಲು ಹೋಗಿ ಬಾಲಕ ಸಾವು: 4 ಗಂಟೆ ಉಪ್ಪಿನಲ್ಲಿ ಶವವಿಟ್ಟು ಬದುಕಿಸಲು ಪ್ರಯತ್ನ!