ದಾವಣಗೆರೆ: ಮಹಾನಗರ ಪಾಲಿಕೆ ಚುನಾವಣೆ ನಡೆದು ಫಲಿತಾಂಶ ಪ್ರಕಟವಾಗಿ ಎರಡು ತಿಂಗಳಾಗುತ್ತಾ ಬಂದರೂ ಇನ್ನೂ ಕೂಡ ಮೇಯರ್ ಯಾರಾಗುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.
ಈಗಾಗಲೇ ಸಾಮಾನ್ಯ ವರ್ಗಕ್ಕೆ ಈ ಪಟ್ಟ ಮೀಸಲಾಗಿದ್ದರೂ ಕಾಂಗ್ರೆಸ್ ಹಾಗೂ ಬಿಜೆಪಿ ಗದ್ದುಗೆಗೇರಲು ರಣತಂತ್ರ ರೂಪಿಸುತ್ತಿವೆ. ಎಲ್ಲಿಯೂ ಬಹಿರಂಗವಾಗಿ ಹೇಳದ ಕಾರಣ ಮೇಯರ್ ಯಾರಾಗ್ತಾರೆ ಎಂಬ ಸಸ್ಪೆನ್ಸ್ ಮುಂದುವರಿದಿದೆ.
ಈಗಾಗಲೇ ಕಾಂಗ್ರೆಸ್ ಮುಖಂಡರು ಪಾಲಿಕೆ ಗದ್ದುಗೆ ನಮ್ಮದೇ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಿದ್ದರೆ, ಬಿಜೆಪಿಯು ಅಧಿಕಾರಕ್ಕೇರುವ ಪ್ರಯತ್ನವನ್ನು ಕೈಬಿಟ್ಟಿಲ್ಲ. ಕೊನೆ ಕ್ಷಣದವರೆಗೂ ಪ್ರಯತ್ನ ಮುಂದುವರಿಸುವ ಯೋಜನೆ ಹಾಕಿಕೊಂಡಿರುವ ಕಮಲ ಪಡೆ, ಶತಾಯಗತಾಯ ಅಧಿಕಾರ ಹಿಡಿಯಲೇಬೇಕೆಂದು ಹಠಕ್ಕೆ ಬಿದ್ದಿದೆ.
ಇದಕ್ಕೆ ಪ್ರತಿ ರಣತಂತ್ರ ರೂಪಿಸಿರುವ ಕಾಂಗ್ರೆಸ್ ಕಳೆದ ಬಾರಿಯೂ ಅಧಿಕಾರ ನಮ್ಮದೇ ಆಗಿತ್ತು. ಈ ಬಾರಿಯೂ ನಮ್ಮದೇ ಆಗಬೇಕೆಂಬ ನಿಟ್ಟಿನಲ್ಲಿ ಈಗಾಗಲೇ ಪಕ್ಷೇತರ ಅಭ್ಯರ್ಥಿ ಉದಯ್ ಕುಮಾರ್ ಅವರು ಕೈ ಹಿಡಿದಿದ್ದಾರೆ ಎಂಬ ಮಾತು ಹೇಳುತ್ತಿದೆ. ಜೊತೆಗೆ ಜೆಡಿಎಸ್ ಅಭ್ಯರ್ಥಿಯ ಬೆಂಬಲ ತಮಗಿದೆ ಎನ್ನುತ್ತಿದೆ. ಮತ್ತೊಂದಡೆ ಬಿಜೆಪಿಯು ಇದೇ ವಿಶ್ವಾಸವನ್ನು ವ್ಯಕ್ತಪಡಿಸುತ್ತಿದೆ. ಈಗಾಗಲೇ ನಾಲ್ವರು ಪಕ್ಷೇತರರು ಬಿಜೆಪಿ ಸೇರಿದ್ದು, ಉಳಿದ ಇಬ್ಬರೂ ಬಿಜೆಪಿ ಬೆಂಬಲಿಸುತ್ತಾರೆ ಎನ್ನುತ್ತಿದ್ದಾರೆ ಕಮಲ ಪಡೆಯ ಮುಖಂಡರು.
ಪಾಲಿಕೆಯಲ್ಲಿ ಕಾಂಗ್ರೆಸ್ ನ 22 ಸದಸ್ಯರು, ನಾಲ್ವರು ಪಕ್ಷೇತರರೂ ಸೇರಿ ಬಿಜೆಪಿ ಸದಸ್ಯರ ಸಂಖ್ಯೆ 21 ಕ್ಕೇರಿದ್ದರೆ, ಪಕ್ಷೇತರ ಅಭ್ಯರ್ಥಿ ಉದಯ್ ಹಾಗೂ ಜೆಡಿಎಸ್ ನ ನೂರ್ ಜಹಾನ್ ಅವರ ಬೆಂಬಲ ಯಾರ ಕಡೆ ಎಂಬ ಪ್ರಶ್ನೆಗೆ ಇದುವರೆಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಹಾಗಾಗಿ, ಮೇಯರ್ ಪಟ್ಟ ಯಾರ ಪಾಲಾಗುತ್ತೆ ಎಂಬ ಸಸ್ಪೆನ್ಸ್ ಗೆ ಉತ್ತರ ಸಿಕ್ಕಿಲ್ಲ.
ಮೇಯರ್ ಆಯ್ಕೆ ದಿನವೇ ಇದಕ್ಕೆ ಉತ್ತರ ಸಿಗಲಿದೆ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ. ಆದ್ರೆ, ಮಾಧ್ಯಮದವರ ಮುಂದೆ ಈ ಬಗ್ಗೆ ಗುಟ್ಟನ್ನು ಬಿಟ್ಟುಕೊಡುತ್ತಿಲ್ಲ. ಉಭಯ ಪಕ್ಷಗಳ ಮುಖಂಡರು ಅಧಿಕಾರಕ್ಕೆ ಏರುತ್ತೇವೆ. ಕಾದು ನೋಡಿ ಎಂದಷ್ಟೇ ಹೇಳುತ್ತಿದ್ದಾರಾದರೂ ಮೇಯರ್ ಪಟ್ಟ ಮಾತ್ರ ಯಾರಿಗೆ ಎಂಬ ಕುತೂಹಲ ದಿನೇ ದಿನೇ ಹೆಚ್ಚಾಗುವಂತೆ ಮಾಡಿವೆ.