ದಾವಣಗೆರೆ: ಅಪ್ಪ-ಅಮ್ಮ, ಬಂಧುಬಳಗದವರಿಲ್ಲದೆಯೇ ರಾಜ್ಯ ಮಹಿಳಾ ನಿಲಯದಲ್ಲಿಯೇ ಬೆಳೆದು ದೊಡ್ಡವರಾದ ಯುವತಿಯರು ಇಂದು ವಿವಾಹ ಬಂಧಕ್ಕೊಳಪಟ್ಟಿದ್ದಾರೆ.
ರಾಮನಗರದ ರಾಜ್ಯ ಮಹಿಳಾ ನಿಲಯದಲ್ಲಿ ವಾಸವಿದ್ದ ಮಂಜುಳಾ, ಕುಪ್ಪಮ್ಮ ಮತ್ತು ರೇಷ್ಮಾ ಇವರ ವಿವಾಹ ಮಹೋತ್ಸವ ಶಾಸ್ತ್ರೋಕ್ತವಾಗಿ ಇಂದು ನೆರವೇರಿತು. ಬೆಳಗ್ಗೆ 11 ರಿಂದ 11.30ರ ವೃಶ್ಚಿಕ ಲಗ್ನದ ಶುಭ ಮುಹೂರ್ತದಲ್ಲಿ ರಾಜ್ಯ ಮಹಿಳಾ ನಿಲಯದ ನಿವಾಸಿಯಾದ ಮಂಜುಳಾ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹೆದ್ನಿ ಗ್ರಾಮದ ಹೆಚ್. ಬಿ. ಉಮೇಶ್ ಜೊತೆ ವಿವಾಹವಾದರು. ಕುಪ್ಪಮ್ಮ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ದೇವಗುಡಿ ಗ್ರಾಮದ ದಯಾನಂದ ರಾಮಚಂದ್ರ ಭಟ್ ಜೊತೆ ಹಾಗೂ ರೇಷ್ಮಾ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮುತಿಗಟ್ಟ ಗ್ರಾಮದ ನಾಗರಾಜ ಸುಬ್ರಾಯ ಹೆಗಡೆ ಜೊತೆ ಮದುವೆಯಾದರು.
ತಮಗೆ ಯಾರೂ ಇಲ್ಲ ಅನ್ನೋ ಕೊರಗು ಮರೆಸುವ ರೀತಿ ಅನಾಥ ಮೂವರು ಯುವತಿಯರ ಮದುವೆ ಮಾಡಿಕೊಡಲಾಗಿದೆ. ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಸೇರಿದಂತೆ ಇತರೆ ಅಧಿಕಾರಿಗಳು ಈ ಅನಾಥ ಹೆಣ್ಣುಮಕ್ಕಳ ಧಾರೆ ಎರೆದದ್ದು ವಿಶೇಷವಾಗಿತ್ತು.
ರಾಜ್ಯ ಮಹಿಳಾ ನಿಲಯದ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪದ್ಮಾ ಬಸವಂತಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೆ.ಹೆಚ್. ವಿಜಯಕುಮಾರ್, ರಾಜ್ಯ ಮಹಿಳಾ ನಿಲಯದ ಅಧೀಕ್ಷಕಿ ನಾಗರತ್ನಮ್ಮ ಎಂ.ವಿ. ಸೇರಿದಂತೆ ಮತ್ತಿತರರ ಸಿಬ್ಬಂದಿ ಈ ಕಲ್ಯಾಣಕ್ಕೆ ಸಾಕ್ಷಿಯಾದರು. ಈ ಹಿಂದೆ ಇದೇ ವಸತಿ ನಿಲಯದಲ್ಲಿದ್ದು ಮದುವೆಯಾದವರು ಇಲ್ಲಿಗೆ ಬಂದು ವಧು-ವರರಿಗೆ ಆಶೀರ್ವದಿಸಿದರು.