ದಾವಣಗೆರೆ: ಮಾಜಿ ಸಚಿವರ ಮಿಲ್ನಲ್ಲಿ (ಫಾರ್ಮ್ ಹೌಸ್) ವನ್ಯಜೀವಿಗಳು ಪತ್ತೆ ಪ್ರಕರಣ ಸಂಬಂಧ ಮಾಜಿ ಸಚಿವರು ಸೇರಿ ಮೂವರಿಗೆ ನ್ಯಾಯಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ದಾವಣಗೆರೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಮಾಜಿ ಸಚಿವರು, ರೈಸ್ ಮಿಲ್ ವ್ಯವಸ್ಥಾಪಕ ಸಂಪಣ್ಣ ಮುತಾಲಿಕ್ ಹಾಗೂ ಕರಿಬಸಯ್ಯ ಅವರಿಗೆ ಜಾಮೀನು ಸಿಕ್ಕಿದೆ.
ಡಿಸೆಂಬರ್ 21ರಂದು ದಾವಣಗೆರೆ ನಗರದ ಆನೆಕೊಂಡದ ಬಳಿ ಇರುವ ರೈಸ್ ಮಿಲ್ ಮೇಲೆ ಅರಣ್ಯ ಇಲಾಖೆ ಹಾಗೂ ಬೆಂಗಳೂರು ಸಿಸಿಬಿ ಪೊಲೀಸರು ಜಂಟಿಯಾಗಿ ದಾಳಿ ನಡೆಸಿದ್ದರು. ಈ ವೇಳೆ ಸ್ಥಳದಲ್ಲಿ ಪತ್ತೆಯಾದ ವನ್ಯಜೀವಿಗಳನ್ನು ರಕ್ಷಣೆ ಮಾಡಿದ್ದರು. ವನ್ಯಜೀವಿ ಪತ್ತೆಯಾಗಿದ್ದ ಕುರಿತಂತೆ ಮಾಜಿ ಸಚಿವರ ಸೇರಿದಂತೆ ಒಟ್ಟು ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಇದರ ಬೆನ್ನಲ್ಲೇ ಮಾಜಿ ಸಚಿವರು ಸೇರಿ ಮೂವರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಇದೀಗ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಮಾಜಿ ಸಚಿವರ ಪರ ನ್ಯಾಯವಾದಿ ಪ್ರಕಾಶ ಪಾಟೀಲ್ ಹಾಗೂ ಮಿಲ್ನ ಮ್ಯಾನೇಜರ್ ಸಂಪಣ್ಣ ಮತ್ತು ಕರಿಬಸಯ್ಯ ಪರ ನ್ಯಾಯವಾದಿ ರಾಮದಾಸ್ ವಾದ ಮಂಡನೆ ಮಾಡಿದ್ದರು. ಸರ್ಕಾರದರ ಪರ ಸರ್ಕಾರಿ ಅಭಿಯೋಜಕರು ವಾದ ಮಂಡಿಸಿದ್ದರು.
ಇದನ್ನೂ ಓದಿ: ವನ್ಯಜೀವಿಗಳು ಪತ್ತೆ ಪ್ರಕರಣ: ಆರೋಪಿಗಳಿಗೆ ನೋಟಿಸ್ ನೀಡುವಂತೆ ಕೋರ್ಟ್ ಸೂಚನೆ