ದಾವಣಗೆರೆ: ತನ್ನ ತಂದೆ ಮಲ್ಲಿಕಾರ್ಜುನ ಖರ್ಗೆ ಹಾಗೂ ತನಗೆ ಬೆದರಿಕೆ ಕರೆ ಬರುತ್ತಿರುವುದು ಹೊಸದೇನಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಸೂಕ್ತ ಕ್ರಮ ಜರುಗಿಸಬೇಕು ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.
ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಲಕ್ಷ್ಮೀಪುರದಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳ ಹಿಂದೆಯೇ ತಂದೆಗೆ ಬೆದರಿಕೆ ಕರೆ ಬಂದಿತ್ತು. ಈ ಸಂಬಂಧ ದೆಹಲಿಯಲ್ಲಿ ದೂರು ದಾಖಲಾಗಿತ್ತು. ಸಂವಿಧಾನದ ಉಳಿವು, ಜನರು ಹಾಗೂ ಕಾನೂನು ಪರ ಮಾತನಾಡಿದರೆ ಇಂತಹ ಸವಾಲು ಎದುರಾಗುತ್ತವೆ. ರಾಜಕಾರಣದಲ್ಲಿ ಇದೆಲ್ಲಾ ಮಾಮೂಲು ಎಂದರು.
ಕೊರೊನಾ ಇಷ್ಟೊಂದು ಪ್ರಮಾಣದಲ್ಲಿ ದೇಶ ಹಾಗೂ ರಾಜ್ಯದಲ್ಲಿ ಹರಡಲು ಬಿಜೆಪಿ ಸರ್ಕಾರಗಳೇ ಕಾರಣ. ಫೆಬ್ರವರಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ಸ್ಥಗಿತಗೊಳಿಸುವಂತೆ ರಾಹುಲ್ ಗಾಂಧಿ ಒತ್ತಾಯಿಸಿದ್ದರೂ ಕ್ರಮ ಕೈಗೊಂಡಿರಲಿಲ್ಲ. ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳುನಾಡು ಸೇರಿದಂತೆ ಬೇರೆ ರಾಜ್ಯಗಳಲ್ಲಿನ ಕನ್ನಡಿಗರನ್ನು ಕಾಲಾವಕಾಶ ಕೊಟ್ಟು ರಾಜ್ಯಕ್ಕೆ ಕರೆ ತರುವಂತೆ ಸರ್ಕಾರಕ್ಕೆ ನಾನು ಪತ್ರ ಬರೆದಿದ್ದೆ. ಆಗ ಬಂದಿದ್ದರೆ ಕಡಿಮೆಯಾಗುತ್ತಿತ್ತು. ಈಗ ಜನರು ಬರುತ್ತಿರುವುದಕ್ಕೆ ಜಾಸ್ತಿಯಾಗುತ್ತಿದೆ ಎಂದರೆ ಹೇಗೆ ಎಂದು ಪ್ರಶ್ನಿಸಿದರು.