ದಾವಣಗೆರೆ: ವ್ಯಕ್ತಿಯ ಗಮನ ಬೇರೆಡೆ ಸೆಳೆದು ಕಳ್ಳರು ಹಣ ಲಪಟಾಯಿಸಿರುವ ಘಟನೆ ಜಿಲ್ಲೆಯ ಜಗಳೂರು ಪಟ್ಟಣದ ಡಿಸಿಸಿ ಬ್ಯಾಂಕ್ ಬಳಿ ನಡೆದಿದೆ. ಕಳ್ಳ ಹಣ ಎಗರಿಸುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಗಮನ ಬೇರೆಡೆ ಸೆಳೆದು ದರೋಡೆ: ಜಗಳೂರು ತಾಲೂಕಿನ ಹನುಮಂತಾಪುರ ಗ್ರಾಮದ ಕೊಟ್ರೇಶ್ ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದಾರೆ. ಕೆನರಾ ಬ್ಯಾಂಕ್ನಲ್ಲಿ ಸಾಲ ರಿನಿವಲ್ ಮಾಡುವುದಕ್ಕೆ ಇಟ್ಟುಕೊಂಡಿದ್ದ ಹಣವನ್ನು ಕಳ್ಳರು ದೋಚಿದ್ದಾರೆ. ಮತ್ತೊಂದು ಬ್ಯಾಂಕ್ನಲ್ಲಿ ಬಂಗಾರದ ಆಭರಣಗಳನ್ನು ಒತ್ತೆ ಇಟ್ಟು, 4 ಲಕ್ಷದ 50 ಸಾವಿರ ರೂಪಾಯಿ ಸಾಲವನ್ನು ಕೊಟ್ರೇಶ್ ಪಡೆದಿದ್ದರು. ಬೈಕ್ ಬ್ಯಾಗ್ನಲ್ಲಿ ಹಣ ಇಟ್ಟುಕೊಂಡು ಹೋಗುತ್ತಿರುವುದನ್ನು ಗಮನಿಸಿದ್ದ ಕಳ್ಳರು, ಕೆಲ ಖದೀಮರು ಅಡ್ಡ ಬಂದಂತೆ ಮಾಡಿ ಗಮನ ಬೇರೆಡೆ ಸೆಳೆದು ಹಣ ಲಪಟಾಯಿಸಿದ್ದಾರೆ. ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಲದ ಸುಳಿಯಲ್ಲಿ ಸಿಲುಕಿದ್ದ ಕೊಟ್ರೇಶ್ ಐದು ಲಕ್ಷ ಸಾಲ ತೀರಿಸಲು ಹೆಚ್ಡಿಎಫ್ಸಿ ಬ್ಯಾಂಕಿನಲ್ಲಿ ತಮ್ಮ ಬಂಗಾರದಾಭರಣಗಳನ್ನು ಒತ್ತೆ ಇಟ್ಟು, 4 ಲಕ್ಷದ 50 ಸಾವಿರ ಹಣವನ್ನು ತಂದಿದ್ದರು. ಆದ್ರೆ ಬ್ಯಾಂಕಿನ ಸಿಬ್ಬಂದಿ ಮಾತ್ರ ನಿಮ್ಮದು 5 ಲಕ್ಷ ಸಾಲ ಇರೋದು, ನೀವು 4 ಲಕ್ಷ 50 ಸಾವಿರ ಹಣವನ್ನು ತಂದಿದ್ದೀರಿ. ಇನ್ನೂ ಐವತ್ತು ಸಾವಿರ ರೂಪಾಯಿ ಕಟ್ಟಿ ಎಂದಿದ್ದರಂತೆ. ಆಗ ಕೊಟ್ರೇಶ್ ಅವರು ಮನೆಯಲ್ಲಿದ್ದ ಐವತ್ತು ಸಾವಿರ ರೂಪಾಯಿ ತರಲು ಹಣದ ಸಮೇತ ಬ್ಯಾಂಕಿನಿಂದ ಹೊರಬಂದು ಬೈಕ್ನಲ್ಲಿ ಹೊರಟಿದ್ದಾರೆ.
ಇದನ್ನೂ ಓದಿ: ಕೊಳ್ಳೇಗಾಲದ ವ್ಯಾಪಾರಿಗೆ ಮಕ್ಮಲ್ ಟೋಪಿ: ಸ್ಕೂಟರ್ ಡಿಕ್ಕಿಯಲ್ಲಿದ್ದ ₹5 ಲಕ್ಷ ಮಾಯ
ಅಲ್ಲಿಂದ ಸ್ವಲ್ಪ ದೂರ ಕ್ರಮಿಸಿ ಬಂದ ಕೊಟ್ರೇಶ್ ಅವರ ಬೈಕ್ಗೆ ಅಪರಿಚಿತ ವ್ಯಕ್ತಿ ಅಡ್ಡ ಬಂದಿದ್ದು, ಅವರ ಗಮನ ಬೇರೆಡೆ ಸೆಳೆದಿದ್ದಾನೆ. ಮತ್ತೋರ್ವ ಬೈಕ್ನ ಬ್ಯಾಗ್ನಲ್ಲಿದ್ದ ಹಣವನ್ನು ಎಗರಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಕರಣವನ್ನು ದಾಖಲು ಮಾಡಿಕೊಂಡಿರುವ ಜಗಳೂರು ಪೊಲೀಸ್ ಠಾಣೆಯ ಪೊಲೀಸರು ಕಳ್ಳರ ಸೆರೆಗೆ ಬಲೆ ಬೀಸಿದ್ದಾರೆ.