ದಾವಣಗೆರೆ: ಮಹಾನಗರ ಪಾಲಿಕೆಯ ಯುಜಿಡಿ ಎಂಜಿನಿಯರ್ ಸೋಗಿನಲ್ಲಿ ಮನೆ ಮಾಲೀಕರ ಗಮನ ಬೇರೆಡೆ ಸೆಳೆದು ಹಾಡಹಗಲೇ ದರೋಡೆ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿ ಆಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಹೊಸಮನೆ ನಿವಾಸಿ ಹೆಚ್. ವೇಣುಗೋಪಾಲ ಬಂಧಿತ ಆರೋಪಿ. ಬಂಧಿತನಿಂದ ಒಟ್ಟು 6 ಲಕ್ಷ ರೂಪಾಯಿ ಮೌಲ್ಯದ 175 ಗ್ರಾಂ ತೂಕದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದ ಹಿನ್ನೆಲೆ
ಕಳೆದ ಆಗಸ್ಟ್ 16ರಂದು ದಾವಣಗೆರೆ ನಗರದ ಶಿವಕುಮಾರ ಸ್ವಾಮಿ ಬಡಾವಣೆಯ ನಿವಾಸಿ ಎಸ್.ಎಂ.ಸುಧಾ ಎಂಬುವವರ ನಿವಾಸಕ್ಕೆ ಮೂವರು ವ್ಯಕ್ತಿಗಳು ತಾವು ಮಹಾನಗರ ಪಾಲಿಕೆ ಯುಜಿಡಿ ಎಂಜಿನಿಯರ್ಗಳು ಎಂದು ಹೇಳಿಕೊಂಡು ಬಂದಿದ್ದರು.
ನಿಮ್ಮ ಮನೆಯ ಚರಂಡಿ ದಾರಿ ರಿಪೇರಿ ಮಾಡಿ ಯುಜಿಡಿ ಪೈಪ್ ಲೈನ್ ಲಿಂಕ್ ಮಾಡಬೇಕಾಗಿದೆ. ಬಾತ್ ರೂಂ ತೋರಿಸಿ ಎಂದು ಹೇಳಿ ಸುಧಾ ಪತಿ ಸುರೇಶ್ ರನ್ನ ಮನೆಯ ಮೊದಲ ಮಹಡಿಗೆ ಕರೆದೊಯ್ದಿದ್ದ ಆರೋಪಿಗಳು, ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳ ಪತ್ತೆಗೆ ದಾವಣಗೆರೆ ದಕ್ಷಿಣ ವೃತ್ತ ವಿಭಾಗದ ಸಿಪಿಐ ತಮ್ಮಣ್ಣ ನೇತೃತ್ವದಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಭದ್ರಾವತಿ ಬಳಿ ವೇಣುಗೋಪಾಲ್ನನ್ನು ಬಂಧಿಸಿ ವಿಚಾರಣೆ ನಡೆಸಿದ ಬಳಿಕ ಇನ್ನಿಬ್ಬರ ಜೊತೆ ಸೇರಿ ದರೋಡೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.ಉಳಿದ ಇಬ್ಬರು ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಎಸ್ಪಿ ಹನುಮಂತರಾಯ ವಿಶ್ವಾಸ ವ್ಯಕ್ತಪಡಿಸಿದರು.
ಈ ಆರೋಪಿಗಳು ಬೇರೆಡೆ ಕಳ್ಳತನ ಮಾಡಿರುವ ಬಗ್ಗೆಯೂ ತನಿಖೆ ನಡೆಸುವುದಾಗಿ ಹೇಳಿದ ಅವರು, ಮನೆಯಲ್ಲಿ ಒಂಟಿಯಾಗಿ ಇರುವವರನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬರುತ್ತಿದ್ದು, ಜನರು ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದರು.