ದಾವಣಗೆರೆ: ರಾಜ್ಯದಲ್ಲಿ ಈಗಾಗಲೇ ಗ್ರಾಮ ಪಂಚಾಯತ್ ಚುನಾವಣೆ ಕಾವು ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲೂ ಕೂಡ ಮೊದಲ ಹಂತದಲ್ಲಿ ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ಸಲ್ಲಿಸಿದ್ದಾರೆ. ಆದ್ರೆ ಇಲ್ಲೊಂದು ಗ್ರಾಮ ಪಂಚಾಯತ್ನಲ್ಲಿ ಮತದಾರರ ಪಟ್ಟಿ ಅದಲು-ಬದಲಾಗಿರುವುದು ಮತದಾರರು ಹಾಗೂ ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ದಾವಣಗೆರೆ ಸೇರಿದಂತೆ ಹೊನ್ನಾಳಿ, ಜಗಳೂರು ತಾಲೂಕುಗಳಲ್ಲಿ ಮೊದಲ ಹಂತದಲ್ಲಿ ಈಗಾಗಲೇ ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಿದ್ದಾರೆ. ದಾವಣಗೆರೆ ತಾಲೂಕಿನ ಶಿರಮಗೊಂಡನ ಹಳ್ಳಿಯಲ್ಲಿ ಮತದಾರರ ಪಟ್ಟಿ ಅದಲು-ಬದಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಈ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮೂರ್ನಾಲ್ಕು ವಾರ್ಡ್‌ಗಳು ಇದ್ದು, ಕಳೆದ ಗ್ರಾ.ಪಂ ಚುನಾವಣೆಯಲ್ಲಿ ಒಂದನೇ ವಾರ್ಡ್‌ನ ಮತದಾರರ ಹೆಸರು ಹಾಗೂ ಅಭ್ಯರ್ಥಿ ಮತದಾರರ ಹೆಸರುಗಳು ಒಂದನೇ ವಾರ್ಡ್ನಲ್ಲೇ ಇದ್ದವು. ಆದ್ದರಿಂದ ಅವರೆಲ್ಲಾ ಒಂದನೇ ವಾರ್ಡ್ನಲ್ಲೇ ಮತದಾನ ಮಾಡಿದ್ದರು. ಈ ಬಾರಿ ಸುಮಾರು 150 ಕ್ಕೂ ಹೆಚ್ಚು ಜನ ಮತದಾರರ ಮತದಾನದ ಪಟ್ಟಿ ಅದಲು-ಬದಲು ಆಗಿದ್ದು, ಒಂದನೇ ವಾರ್ಡ್ನಿಂದ ಎರಡನೇ ವಾರ್ಡ್‌ಗೆ ಬಂದು ಮತದಾನ ಮಾಡಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದಡೆ. ಮತದಾನ ಮಾಡಲು ಮೂರ್ನಾಲ್ಕು ಕಿ.ಮೀ ಕ್ರಮಿಸಿ ಮತದಾನ ಮಾಡಬೇಕಾಗಿದೆ. ಇದರಿಂದ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮತದಾರರ ಪಟ್ಟಿ ಸರಿಪಡಿಸದಿದ್ದರೆ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಕೆ ರವಾನಿಸಿದ್ದಾರೆ.
ಓದಿ: ಬರಲಿದೆ ಮತ್ತೊಂದು ಕ್ರೀಡಾ ಬಯೋಪಿಕ್: ಚೆಸ್ ದಂತಕತೆಯ ಸಿನಿಮಾಗೆ ಬಾಲಿವುಡ್ ಸಿದ್ಧತೆ
ಕಳೆದ ದಿನ ನಾಮಪತ್ರ ಸಲ್ಲಿಸಲು ಬಂದ ಅಭ್ಯರ್ಥಿಗಳು ಮತದಾರರ ಪಟ್ಟಿ ಪರಿಶೀಲಿಸಿದಾಗ ಅದಲು-ಬದಲು ಆಗಿರುವುದು ಕಂಡು ಬಂದಿದೆ ಎನ್ನಲಾಗ್ತಿದೆ. ಇದನ್ನು ಖಂಡಿಸಿದ ಅಭ್ಯರ್ಥಿಗಳು ಚುನಾವಣಾ ಆಯೋಗ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮತದಾನ ಮಾಡಲು ಎರಡನೇ ವಾರ್ಡ್ ಶಿರಮಗೊಂಡನಹಳ್ಳಿ ಕ್ಯಾಂಪ್‌ನಿಂದ ಎರಡನೇ ವಾರ್ಡ್ ಶಿರಮಗೊಂಡನ ಹಳ್ಳಿಗೆ ಆಗಮಿಸಿ ಮತದಾನ ಮಾಡುವ ಸಮಸ್ಯೆ ಎದುರಾಗಿದೆ. ಒಂದು ಮನೆಯಲ್ಲಿ ಹತ್ತು ಮತಗಳು ಇದ್ರೇ ಐದು ಮತಗಳು ಒಂದನೇ ವಾರ್ಡ್ನಲ್ಲಿ ಇನ್ನುಳಿದ ಐದು ಮತಗಳನ್ನು ಎರಡನೇ ವಾರ್ಡ್‌ಗೆ ವಿಭಜನೆ ಮಾಡಿದ್ದಾರೆ ಎಂಬುದು ಮತದಾರರ ಆರೋಪ ಆಗಿದೆ.
ಒಟ್ಟಾರೆ ಗ್ರಾಮ ಪಂಚಾಯತ್ ಚುನಾವಣೆ ಆರಂಭವಾಗಲು ಕೆಲವೇ ದಿನಗಳು ಬಾಕಿ ಇರುವ ಬೆನ್ನಲ್ಲೇ ಅಧಿಕಾರಿಗಳ ಎಡವಟ್ಟಿನಿಂದ ಮತದಾರ ಪಟ್ಟಿ ಅದಲು ಬದಲು ಆಗಿದೆ ಎನ್ನಲಾಗ್ತಿದೆ. ಅಜಾಗರೂಕತೆಯಿಂದ ಆಗಿರುವ ತಪ್ಪನ್ನು ಅಧಿಕಾರಿಗಳು ತಕ್ಷಣ ಸರಿಪಡಿಸಬೇಕೆಂಬ ಕೂಗು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.