ದಾವಣಗೆರೆ: ಆತ್ಮ ನಿರ್ಭರ ನಿಧಿ ಯೋಜನೆಯಡಿ 10 ಸಾವಿರ ರೂಪಾಯಿ ಕಿರು ಸಾಲ ಮತ್ತು ಬಡ್ಡಿ ಸಹಾಯ ಧನ ಪಡೆಯಬಹುದಾಗಿದ್ದು, ಆಸಕ್ತ ಬೀದಿ ವ್ಯಾಪಾರಸ್ಥರು ಅರ್ಜಿ ಸಲ್ಲಿಸುವ ಮೂಲಕ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ಕೋವಿಡ್-19 ಲಾಕ್‍ಡೌನ್ ಬೀದಿ ವ್ಯಾಪಾರಸ್ಥರ ಜೀವನೋಪಾಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು, ಬೀದಿ ವ್ಯಾಪಾರಿಗಳ ಜೀವನೋಪಾಯ, ವ್ಯವಹಾರ ಪುನರಾರಂಭಿಸಲು ಬಂಡವಾಳ ಒದಗಿಸುವ ತುರ್ತು ಅವಶ್ಯಕತೆ ಇರುವುದರಿಂದ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಮಂತ್ರಾಲಯವು ಬೀದಿ ವ್ಯಾಪಾರಸ್ಥರಿಗೆ ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ ನಿಧಿ ಯೋಜನೆಯನ್ನು ಅನುಷ್ಟಾನಗೊಳಿಸಲು ಆದೇಶ ಹೊರಡಿಸಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇನ್ನು ಬೀದಿ ಬದಿ ವ್ಯಾಪಾರಸ್ಥರ ಕಾರ್ಡ್ ಹೊಂದದಿರುವವರು ಮಹಾನಗರ ಪಾಲಿಕೆಯಲ್ಲಿ ತೆರೆಯಲಾಗಿರುವ ಸಹಾಯ ಕೇಂದ್ರದ ಮೂಲಕ 24 ಗಂಟೆಯೊಳಗೆ ಕಾರ್ಡ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಸಿದ ಕೇವಲ 10 ದಿನಗಳ ಒಳಗಾಗಿ ಸಾಲ ಮತ್ತು ಸಹಾಯಧನ ದೊರಕಲಿದ್ದು, ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮನವಿ ಮಾಡಿದ್ದಾರೆ.