ದಾವಣಗೆರೆ: ಶಾಸಕ ಎಂ ಪಿ ರೇಣುಕಾಚಾರ್ಯ ಸಹೋದರ ಎಂ ಪಿ ರಮೇಶ್ ಅವರ ಪುತ್ರ ಚಂದ್ರಶೇಖರ್ ನಾಪತ್ತೆ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಎಸ್ ಪಿ ಸಿ ಬಿ ರಿಷ್ಯಂತ್ ನೇತೃತ್ವದ ತಂಡದಿಂದ ವಿವಿಧ ಆಯಾಮದಲ್ಲಿ ತನಿಖೆ ಚುರುಕುಗೊಳಿಸಲಾಗಿದೆ. ಚಂದ್ರಶೇಖರ್ ದ್ವೇಷ ಅಥವಾ ಹಣಕಾಸು ವಿಚಾರದಲ್ಲಿ ಅಪಹರಣ ಆಗಿರಬೇಕು ಎಂಬ ಶಂಕೆ ವ್ಯಕ್ತವಾಗುತ್ತಿದೆ.
ನಾಪತ್ತೆಯಾಗಿ ಐದು ದಿನ: ಚಂದ್ರಶೇಖರ್ ತಂದೆ ಎಂ ಪಿ ರಮೇಶ್ ಕ್ಲಾಸ್ 1 ಗುತ್ತಿಗೆದಾರರಾಗಿದ್ದು, ಈ ವಿಚಾರದಲ್ಲಿ ಏನಾದರೂ ಅಪಹರಣ ಮಾಡಲಾಗಿದೆಯಾ ಎಂದು ಪರಿಶೀಲನೆ ನಡೆಸಲಾಗುತ್ತಿದೆ. ಚಂದ್ರಶೇಖರ್ ನಾಪತ್ತೆಯಾಗಿ ಇಂದಿಗೆ ಐದನೇ ದಿನವಾಗಿದೆ. ಭಾನುವಾರ ಸಂಜೆ ಶಿವಮೊಗ್ಗದ ಗೌರಿಗದ್ದೆಗೆ ಹೋಗಿದ್ದ ಚಂದ್ರಶೇಖರ್, ಗೌರಿಗದ್ದೆಯಿಂದ ಶಿವಮೊಗ್ಗಕ್ಕೆ ಬಂದಿದ್ದಾರೆ. ಆದರೆ, ಶಿವಮೊಗ್ಗದಿಂದ ಹೊನ್ನಾಳಿಗೆ ಬಂದಿಲ್ಲ ಎಂದು ಚಂದ್ರಶೇಖರ್ ತಂದೆ ಎಂ ಪಿ ರಮೇಶ್ ಹೇಳಿದ್ದಾರೆ.
ಎರಡನೇ ಆಯಾಮದಲ್ಲಿ ಪೊಲೀಸರಿಂದ ತನಿಖೆ: ಎರಡನೇ ಆಯಾಮದಲ್ಲಿ ಪೊಲೀಸರು ಯಾವ ರೀತಿ ತನಿಖೆ ಮಾಡುತ್ತಿದ್ದಾರೆ ಎಂದು ನೋಡುವುದಾದರೆ. ಕಾಣೆಯಾಗಿರುವ ಚಂದ್ರಶೇಖರ್ ಅವರ ಒಂದು ವರ್ಷದ ಕಾಲ್ ಹಿಸ್ಟರಿ ಕಲೆ ಹಾಕಿದ್ದಾರೆ. ಒಂದು ವರ್ಷದ ಕಾಲ್ ಹಿಸ್ಟರಿಯಲ್ಲಿ ಅತಿ ಹೆಚ್ಚು ಯಾರ ಜೊತೆ ಮಾತನಾಡಿದ್ದಾರೆ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.
ಚಂದ್ರಶೇಖರ್ 6 ತಿಂಗಳಿನಿಂದ ಇಬ್ಬರ ಜೊತೆ ಅತಿ ಹೆಚ್ಚು ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಇತ್ತೀಚಿನ 6 ತಿಂಗಳ ಕಾಲ್ ಲಿಸ್ಟ್ನಲ್ಲಿ ಅವರ ಜೊತೆ ಸಂಪರ್ಕದಲ್ಲಿಲ್ಲ ಎಂಬ ಸಂಗತಿ ಕೂಡ ಬಹಿರಂಗವಾಗಿದೆ. ಈ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಚಂದ್ರು ಜೊತೆ ಹೆಚ್ಚು ಮಾತನಾಡಿರುವ ಆ ಇಬ್ಬರು ಯಾರು ?, ಅವರ ಹಿನ್ನೆಲೆ ಏನು ?ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಇದಲ್ಲದೇ ಚಂದ್ರು ಆ ಇಬ್ಬರ ಜೊತೆ ಯಾವ ರೀತಿಯ ವ್ಯವಹಾರ ನಡೆಸುತ್ತಿದ್ದರು ಎನ್ನುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಮೂರನೇ ಆಯಾಮದಲ್ಲಿ ಪೊಲೀಸರ ತನಿಖೆ: ಮೂರನೇ ಆಯಾಮದಲ್ಲಿ ಪೊಲೀಸರು ಯಾವ ರೀತಿ ತನಿಖೆ ನಡೆಸುತ್ತಿದ್ದಾರೆ ಎಂಬುದನ್ನು ಗಮನಿಸುವುದಾದರೆ, ನಾಪತ್ತೆಯಾಗಿರುವ ಚಂದ್ರು ಆತ್ಮೀಯ ಸ್ನೇಹಿತ ಶಿವಮೊಗ್ಗ ಮೂಲದ ಕಿರಣ್ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಭಾನುವಾರ ಸಂಜೆ ಸ್ನೇಹಿತ ಕಿರಣ್ ಜೊತೆ ಚಂದ್ರು ಗೌರಿಗದ್ದೆಗೆ ವಿನಯ್ ಗುರೂಜಿಯನ್ನು ಕಾಣಲು ಹೋಗಿದ್ದರು. ಇದರಿಂದ ಮೂರು ದಿನಗಳಿಂದ ದಾವಣಗೆರೆ ಪೊಲೀಸರ ತಂಡ ಕಿರಣ್ನನ್ನು ವಿಚಾರಣೆ ನಡೆಸುತ್ತಿದೆ.
ನಾಲ್ಕನೇ ಆಯಾಮದಲ್ಲಿ ಪೊಲೀಸರ ತನಿಖೆ: ಚಂದ್ರು ಅವರನ್ನ ಹಲವು ದಿನಗಳಿಂದ ಶಿಫ್ಟ್ ಡಿಸೈರ್ ಕಾರೊಂದು ಫಾಲೋ ಮಾಡುತ್ತಿದ್ದನ್ನು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಹೊನ್ನಾಳಿಯಲ್ಲಿ ಯಾವುದೇ ಕಾರ್ಯಕ್ರಮಕ್ಕೆ ಹೋಗಲಿ ಆತನನ್ನು ಹಿಂಬಾಲಿಸುತ್ತಿದ್ದ ಕಾರಿನ ಬಗ್ಗೆ ಕಾಣೆಯಾದ ಚಂದ್ರು ಆಪ್ತರು ಕಾರು ಫಾಲೋ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದರು. ಆದರೆ ಚಂದ್ರು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದ ಎಂದು ಚಂದ್ರು ಆಪ್ತರು ಕಳೆದ ರಾತ್ರಿ ರೇಣುಕಾಚಾರ್ಯ ಬಳಿ ಈ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್ ಕಾರಿನ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆ....
ಇದರಿಂದ ಶಿವಮೊಗ್ಗ ಹಾಗೂ ದಾವಣಗೆರೆ ಪೊಲೀಸರು ಶಿಫ್ಟ್ ಡಿಸೈರ್ ಕಾರಿನ ಹಾದಿ ಹಿಡಿದಿದ್ದಾರೆ. ಹಳೆಯ ಸಿಸಿ ಕ್ಯಾಮೆರಾ ಫುಟೇಜ್ಗಳನ್ನು ಕೂಡ ಪರಿಶೀಲನೆ ಮಾಡುತ್ತಿದ್ದಾರೆ. ಶಿಫ್ಟ್ ಕಾರಿನಲ್ಲಿ ಬಂದವರು ಚಂದ್ರು ನನ್ನು ಕಿಡ್ನಾಪ್ ಮಾಡಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗುತ್ತಿದೆ.