ದಾವಣಗೆರೆ: ಕಾರಿನಲ್ಲಿ ಬಂದ ಕೆಲವರು ವಿದ್ಯಾರ್ಥಿನಿಯೊಬ್ಬರನ್ನು ಕಿಡ್ನಾಪ್ ಮಾಡಲು ಯತ್ನಿಸಿ ವಿಫಲವಾಗಿರುವ ಘಟನೆ ತಾಲೂಕಿನ ತೋಳಹುಣಸೆ ಬಳಿ ನಡೆದಿದೆ. ವಿದ್ಯಾ ಸಂಸ್ಥೆಯೊಂದರ ಆವರಣದಲ್ಲಿ ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ. ಸಿನಿಮೀಯ ರೀತಿಯಲ್ಲಿ ಕಿಡ್ನಾಪ್ ಮಾಡಲು ಯತ್ನಿಸುವ ವೇಳೆ ಅಲ್ಲಿನ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಆ ಯುವತಿಯನ್ನು ರಕ್ಷಿಸಿದ್ದಾರೆ. ಬಲವಂತವಾಗಿ ಕಾರಿನಲ್ಲಿ ಎಳೆದೊಯ್ಯುತ್ತಿರುವ ವಿಡಿಯೋ ಜಾಲತಾಣದಲ್ಲಿ ಹರಿದಾಡಿದೆ.
ಬಳ್ಳಾರಿ ಮೂಲದ ವಿದ್ಯಾರ್ಥಿನಿ ಇಲ್ಲಿನ ವಿವಿಯೊಂದರಲ್ಲಿ ಅಧ್ಯಯನ ಮಾಡುತ್ತಿದ್ದು, ಸಿನಿಮೀಯ ರೀತಿ ಕಾರಿನಲ್ಲಿ ಬಂದ ಯುವಕರು ಬಲವಂತವಾಗಿ ಕರೆದೊಯ್ಯುತ್ತಿದ್ದರು. ರಕ್ಷಣೆಗಾಗಿ ವಿದ್ಯಾರ್ಥಿನಿ ಕಿರುಚಾಡಿದ್ದರಿಂದ ಸ್ಥಳಕ್ಕೆ ಬಂದ ವಿದ್ಯಾಸಂಸ್ಥೆಯ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಕಾರಿಗೆ ಅಡ್ಡವಾಗಿ ನಿಂತು ಆಕೆಯನ್ನು ರಕ್ಷಿಸಿದ್ದಾರೆ. ಕೌಟಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯ ಕುಟುಂಬಸ್ಥರೇ ಆಕೆಯನ್ನು ಕಿಡ್ನಾಪ್ ಮಾಡಲು ಯತ್ನಿಸಿದ್ದಾರೆ ಅನ್ನೋದು ಘಟನೆ ಬಳಿಕ ಗೊತ್ತಾಗಿದೆ.
''ವಿದ್ಯಾರ್ಥಿನಿಯನ್ನು ಹೀಗೆ ಬಲವಂತವಾಗಿ ಕರೆದುಕೊಂಡು ಹೋಗುವುದು ತಪ್ಪು. ನಿಮ್ಮ ಕೌಟುಂಬಿಕ ಸಮಸ್ಯೆ ಏನೇ ಇದ್ದರೂ ವಿದ್ಯಾಸಂಸ್ಥೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ಯುವತಿಯನ್ನು ಒಪ್ಪಿಸಿ ಕರೆದುಕೊಂಡು ಹೋಗಿ'' ಎಂದು ಪ್ರಾಧ್ಯಾಪಕರು ಪೋಷಕರಿಗೆ ಬುದ್ಧಿವಾದ ಹೇಳಿದ ಮೇಲೆ ಆ ಯುವತಿಯನ್ನು ಬಿಟ್ಟು ಕಳುಹಿಸಿದ್ದಾರೆ.
''ನನಗೆ ಇಷ್ಟವಿಲ್ಲದ ಮದುವೆ ಮಾಡಲಾಗಿದೆ. ಓದಿನಲ್ಲಿ ಹೆಚ್ಚು ತೊಡಗಿದ್ದರಿಂದ ಇತ್ತೀಚೆಗೆ ಊರಿಗೆ ಹೋಗುವುದನ್ನು ನಿಲ್ಲಿಸಿದ್ದೆ. ಊರಿಗೆ ಬಂದು ಗಂಡನೊಂದಿಗೆ ಸಂಸಾರ ಮಾಡುವಂತೆ ನನಗೆ ನನ್ನ ಪೋಷಕರು ಹಾಗೂ ಕುಟುಂಬಸ್ಥರು ಹೇಳುತ್ತಿದ್ದರು. ಆದರೆ, ಅವರೇ ಇಂದು ಕಿಡ್ನ್ಯಾಪ್ ಮಾಡಲು ಯತ್ನಿಸಿದ್ದಾರೆ'' ಎಂದು ಯುವತಿ ಹೇಳಿಕೆ ನೀಡಿದ್ದಾಳೆ.
ಘಟನೆ ಬಳಿಕ ವಿದ್ಯಾರ್ಥಿನಿಯನ್ನು ದಾವಣಗೆರೆ ಗ್ರಾಮಾಂತರ ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿ ವಿದ್ಯಾರ್ಥಿನಿಯ ಹೇಳಿಕೆ ಪಡೆದು ಮರಳಿ ವಿದ್ಯಾಸಂಸ್ಥೆಗೆ ಕಳುಹಿಸಿದ್ದಾರೆ.
ಪೊಲೀಸರು ಹೇಳಿದ್ದಿಷ್ಟು: ಈ ಘಟನೆಗೆ ಸಂಬಂಧಿಸಿದಂತೆ ದಾವಣಗೆರೆ ಗ್ರಾಮಾಂತರ ಠಾಣೆಯ ಪಿಎಸ್ಐ ಪ್ರತಿಕ್ರಿಯಿಸಿ, ''ಇದು ವಿದ್ಯಾರ್ಥಿನಿಯ ಕಿಡ್ನ್ಯಾಪ್ ಅಲ್ವೇ ಅಲ್ಲ. ವಿದ್ಯಾರ್ಥಿನಿಯ ತಾಯಿ ತನ್ನ ತಮ್ಮನನ್ನು ಕೊಟ್ಟು ಮದುವೆ ಮಾಡಿಸಿದ್ದರು. ಆದರೆ, ಅದು ಅ ಯುವತಿಗೆ ಇಷ್ಟವಿದ್ದಿಲ್ಲ. ಹಾಗಾಗಿ ವಿದ್ಯಾರ್ಥಿನಿಯು ಊರಿಗೆ ಹೋಗುತ್ತಿರಲಿಲ್ಲ. ಬಲವಂತವಾಗಿ ಕರೆದೊಯ್ಯಲು ಯತ್ನಿಸುತ್ತಿದ್ದಾಗ ಇಷ್ಟೆಲ್ಲ ರಾದ್ದಾಂತವಾಗಿದೆ. ಆ ವಿದ್ಯಾರ್ಥಿನಿಯನ್ನು ಸದ್ಯ ಠಾಣೆಗೆ ಕರೆಸಿ ಹೇಳಿಕೆ ಪಡೆದು ಕಳುಹಿಸಿಕೊಡಲಾಗಿದೆ ಎಂದರು".
ಇದನ್ನೂ ಓದಿ: ಟ್ವೀಟ್ ಮೂಲಕ ಲವ್ ಜಿಹಾದ್ ಆರೋಪ ಮಾಡಿದ ಯುವತಿ.. ಅಧಿಕೃತ ದೂರು ನೀಡುವಂತೆ ಸೂಚನೆ ನೀಡಿದ ಬೆಂಗಳೂರು ಪೊಲೀಸರು