ದಾವಣಗೆರೆ: ಸೇವೆ ಖಾಯಂಗೊಳಿಸಬೇಕು, ಕೋವಿಡ್ ವಿರುದ್ಧ ಹೋರಾಡುತ್ತಿರುವ ಗುತ್ತಿಗೆ ನೌಕರರಿಗೆ 25 ಸಾವಿರ ರೂಪಾಯಿ ವಿಶೇಷ ಭತ್ಯೆ ನೀಡಬೇಕೆಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎನ್ಹೆಚ್ಎಂ ಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲಾಗಿದೆ.
ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ ಗುತ್ತಿಗೆ ನೌಕರರಾಗಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ಶುಶ್ರೂಕಿಯರು, ಯೋಗಶಾಲಾ ತಂತ್ರಜ್ಞರು, ನೇತ್ರ ಅಧಿಕಾರಿಗಳು, ಫಾರ್ಮಾಸಿಸ್ಟ್ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಐದು ತಿಂಗಳಿನಿಂದ ಯಾವುದೇ ರಜೆ ತೆಗೆದುಕೊಳ್ಳದೇ ಹಗಲಿರುಳು ಕೋವಿಡ್ ವಿರುದ್ಧ ಹೋರಾಡುತ್ತಿದ್ದೇವೆ. ಆದರೂ ನಮ್ಮ ಬೇಡಿಕೆ ಈಡೇರಿಸುವತ್ತ ರಾಜ್ಯ ಸರ್ಕಾರ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಶುಶ್ರೂಕಿಯರಿಗೆ 25 ಸಾವಿರ, ಫಾರ್ಮಾಸಿಸ್ಟ್ಗಳಿಗೆ 20 ಸಾವಿರ, ಪ್ರಯೋಗಶಾಲಾ ತಂತ್ರಜ್ಞರಿಗೆ 20 ಸಾವಿರ ರೂಪಾಯಿ ವೇತನ ನೀಡಲಾಗುತ್ತಿದೆ. ಕಳೆದ 16 ವರ್ಷಗಳಿಂದ ಕೆಲಸ ಮಾಡುತ್ತಿರುವ ಗುತ್ತಿಗೆ ನೌಕರರಿಗೆ ಕೇವಲ 12 ಸಾವಿರ ರೂಪಾಯಿ ನೀಡಲಾಗುತ್ತಿದೆ. ಈ ತಾರತಮ್ಯ ಸರಿಪಡಿಸಬೇಕು. ನಮಗೂ ಆರೋಗ್ಯ ವಿಮೆ ನೀಡಬೇಕು ಎಂದು ಮುಷ್ಕರನಿರತರು ಒತ್ತಾಯಿಸಿದ್ದಾರೆ.
ಇಂದಿನಿಂದ ಕೆಲಸ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದೇವೆ. ಬೇಡಿಕೆ ಈಡೇರದ ಹೊರತು ಯಾವುದೇ ಕಾರಣಕ್ಕೆ ಹೋರಾಟ ಹಿಂಪಡೆಯುವುದಿಲ್ಲ. ಇಂಥ ಪರಿಸ್ಥಿತಿ ಎದುರಾಗಲು ಸರ್ಕಾರದ ನಿರ್ಲಕ್ಷ್ಯ ಧೋರಣೆಯೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.