ಹರಿಹರ: ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಮಠದಲ್ಲಿ ಹಮ್ಮಿಕೊಂಡಿದ್ದ 2ನೇ ವರ್ಷದ ವಾಲ್ಮೀಕಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ರಾಜ್ಯ ಮಟ್ಟದ ಎಸ್ಟಿ ನೌಕರರ ಸಮಾವೇಶವನ್ನು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಉದ್ಘಾಟಿಸಿದರು.
ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಸೇವೆಯಲ್ಲಿರುವ ನಾವು ಗುಣಮಟ್ಟದ ಸೇವೆ ಮಾಡುವ ಕಡೆ ಗಮನ ಹರಿಸಬೇಕು ಎಂದರು. ಸರ್ಕಾರಿ ನೌಕರರ ಸೇವೆಯ ಶ್ರಮದಿಂದ ದೇಶದಲ್ಲಿಯೇ ನಾವು 6ನೇ ಸ್ಥಾನ ಪಡೆದಿದ್ದೇವೆ. ಆದರೆ ದೇಶದ 22 ರಾಜ್ಯಗಳಲ್ಲಿ ಕೇಂದ್ರ ಸರ್ಕಾರಿ ನೌಕರರ ಸರಿ ಸಮಾನವಾಗಿ ವೇತನವನ್ನು ಪಡೆದುಕೊಳ್ಳುತ್ತಿದ್ದು ನಮ್ಮ ಹೋರಾಟದ ಫಲವಾಗಿ 2022 ರೊಳಗಾಗಿ ನಮ್ಮ ರಾಜ್ಯ ಸರ್ಕಾರಿ ನೌಕರರು ಸಮಾನ ವೇತನ ಪಡೆದುಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದರು.
ಮಾರ್ಚ್‌ನಲ್ಲಿ ಮಂಡನೆಯಾಗುತ್ತಿರುವ ರಾಜ್ಯ ಮುಂಗಡ ಪತ್ರದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಮತ್ತು ಅವಲಂಬಿತರಿಗೆ ಸಂಪೂರ್ಣ ಉಚಿತವಾಗಿ ಚಿಕೆತ್ಸೆಯನ್ನು ನೀಡಬೇಕೆನ್ನುವ ಬೇಡಿಕೆಯನ್ನಿಟ್ಟಿದ್ದು, ಈಡೇರಿಸುವ ಭರವಸೆ ಇದೆ. ಸಮಾನ ಕೆಲಸಕ್ಕೆ ಸಮಾನ ವೇತನ, ಕೆಎಸ್ಆರ್ಟಿಸಿ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವುದು, ಎನ್.ಪಿ.ಎಸ್ ಸಮಸ್ಯೆ ಸೇರಿದಂತೆ ರಾಜ್ಯ ಎಸ್.ಟಿ ನೌಕರರ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರೀಗಳ ಮಾರ್ಗದರ್ಶನದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಷಡಕ್ಷರಿ ಹೇಳಿದ್ರು.
ಇನ್ನು, ಸಮಾವೇಶದಲ್ಲಿ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಐರಣಿ ಹೊಳೆಮಠದ ಶ್ರೀ ಬಸವರಾಜ ದೇಶಿಕೇಂದ್ರ ಸ್ವಾಮೀಜಿ, ಎಸ್ಟಿ ನೌಕರರ ರಾಜ್ಯಾಧ್ಯಕ್ಷ ತಿಪ್ಪೇಸ್ವಾಮಿ, ಎ.ಸಿ, ಹುನುಮ ನರಸಯ್ಯ, ಎ.ರಾಜಶೇಖರ್, ಟಿ.ಟಿ. ಚಂದ್ರಶೇಖರಪ್ಪ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.