ದಾವಣಗೆರೆ: ಎಸ್ಟಿ ಮೀಸಲಾತಿಯನ್ನು ರಾಜ್ಯದಲ್ಲಿ ಶೇ 3 ರಿಂದ 7.5ಕ್ಕೆ ಹೆಚ್ಚಿಸುವಂತೆ ಆಗ್ರಹಿಸಿ ಇದೇ 9 ರಂದು ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ವಾಲ್ಮೀಕಿ ಗುರುಪೀಠ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ತಿಳಿಸಿದರು.
ನಗರದ ನಾಯಕ ಹಾಸ್ಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶ್ರೀಗಳು, ಬಹುದಿನದ ಬೇಡಿಕೆಯಾದ ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ 3 ರಿಂದ 7.5ಕ್ಕೆ ಹೆಚ್ಚಿಸಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಸಂವಿಧಾನ ಬದ್ಧವಾಗಿ ಹಾಗೂ ಕಾನೂನಾತ್ಮಕವಾಗಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡುವುದು ಸರ್ಕಾರದ ಕರ್ತವ್ಯ. ಆದರೆ ಇದುವರೆಗೂ ಸರ್ಕಾರ ಆ ಕೆಲಸ ಮಾಡಿಲ್ಲ ಎಂದು ದೂರಿದರು.
ಕೇಂದ್ರ ಸರ್ಕಾರ ಔದ್ಯೋಗಿಕವಾಗಿ, ಶೈಕ್ಷಣಿಕವಾಗಿ ಶೇಕಡ 7.5 ಮೀಸಲಾತಿ ನೀಡಿರುತ್ತದೆ. ಇದೇ ರೀತಿ ರಾಜ್ಯ ಸರ್ಕಾರದಿಂದಲೂ ಕೂಡ 7.5 ಮೀಸಲಾತಿ ಕಲ್ಪಿಸಿಕೊಡಬೇಕು. ನಕಲಿ ಜಾತಿ ತಡೆಯಬೇಕು ಎಂದು ಒತ್ತಾಯಿಸಿ ರಾಜನಹಳ್ಳಿಯಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. 9 ರಂದು ರಾತ್ರಿ ದಾವಣಗೆರೆ ಹಾಸ್ಟೆಲ್ನಲ್ಲಿ ಉಳಿದುಕೊಳ್ಳಲಾಗುವುದು. ಬಳಿಕ 10ಕ್ಕೆ ಆನಗೋಡು, 11ಕ್ಕೆ ಭರಮಸಾಗರ ಮೂಲಕ ಬೆಂಗಳೂರು ತಲುಪಿ ವಿಧಾನಸೌಧ ಬಳಿ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಫ್ರೀಡಂ ಪಾರ್ಕ್ನಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.