ಹರಿಹರ: ರಾಜ್ಯದ ಸಹೃದಯ ರಾಜಕಾರಣಿಯಾಗಿ ಹಲವು ಕೊಡುಗೆಗಳನ್ನು ನೀಡಿದ್ದ ಸುರೇಶ್ ಅಂಗಡಿಯವರ ನಿಧನದ ಸುದ್ದಿ ಅತ್ಯಂತ ದುಃಖದ ವಿಷಯ ಎಂದು ಪಂಚಮಸಾಲಿ ಪೀಠದ ಶ್ರೀ ಜಗದ್ಗುರು ವಚನಾನಂದ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.
ಬೆಳಗಾವಿಯ ಕೆ.ಕೆ.ಕೊಪ್ಪ ಗ್ರಾಮದಲ್ಲಿ ಜನಿಸಿದ್ದ ಸುರೇಶ್ ಅಂಗಡಿಯವರು ನಾಲ್ಕು ಬಾರಿ ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿದ್ದವರು. 2019ರಲ್ಲೂ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಆರಿಸಿ ಬಂದು ಮೊದಲ ಬಾರಿಗೆ ಮೋದಿ ಸರ್ಕಾರದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದರು. ಹತ್ತು ದಿನಗಳ ಹಿಂದೆಯಷ್ಟೇ ದೂರವಾಣಿ ಮೂಲಕ ಮಾತನಾಡಿ ಯೋಗಕ್ಷೇಮ ವಿಚಾರಿಸಿದ್ದೆವು. ಆ ನೆನಪು ಮಾಸುವ ಮುನ್ನವೇ ಸುರೇಶ್ ಅಂಗಡಿಯವರು ಇಹಲೋಕ ತ್ಯಜಿಸಿರುವುದು ಅತ್ಯಂತ ದುಃಖದ ವಿಷಯವಾಗಿದೆ ಎಂದಿದ್ದಾರೆ.
ನಾಡು ಒಬ್ಬ ಸಹೃದಯ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ. ಅವರ ಕುಟುಂಬ, ಸ್ನೇಹ ವರ್ಗ, ಕ್ಷೇತ್ರದ ಜನತೆಗೆ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲೆಂದು ಪ್ರಾರ್ಥಿಸುತ್ತೇನೆ. ಸುರೇಶ್ ಅಂಗಡಿಯವರ ಆತ್ಮಕ್ಕೆ ಭಗವಂತ ಶಾಂತಿ ಕರುಣಿಸಲಿ. ಓಂ ಶಾಂತಿ ಎಂದು ತಮ್ಮ ಫೇಸ್ಬುಕ್ ಪೇಜ್ನಲ್ಲಿ ಸಂತಾಪ ಸೂಚಿಸಿದ್ದಾರೆ.