ದಾವಣಗೆರೆ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸರ್ವ ಧರ್ಮೀಯರೂ ಒಟ್ಟು ಸೇರಿ ಸೌಹಾರ್ದಯುತ ಕ್ರೀಡಾಕೂಟ ಆಯೋಜಿಸಿದ್ದರು. ಕೆಟಿಜೆ ನಗರದ 14ನೇ ಕ್ರಾಸ್ನಲ್ಲಿ 'ನಮ್ಮ ಗಲ್ಲಿ, ನಮ್ಮ ಹೆಮ್ಮೆ' ಹೆಸರಿನಡಿ ಈ ಕ್ರೀಡಾಕೂಟ ನಡೆಯಿತು.
ಮಕ್ಕಳು, ಮಹಿಳೆಯರಿಗೆ ಪ್ರತ್ಯೇಕ ಕ್ರೀಡೆಗಳಿದ್ದವು. ಬಲೂನ್ನಲ್ಲಿ ಲೋಟ ಹಿಡಿದುಕೊಂಡು ಬರುವುದು, ಮಕ್ಕಳಿಗೆ ಮ್ಯೂಸಿಕಲ್ ಚೇರ್, ರಂಗೋಲಿ, ಹಾಡುವ ಸ್ಪರ್ಧೆ, ದಂಪತಿಗಳಿಗೆ ಕಣ್ಣಿಗೆ ಬಟ್ಟೆ ಕಟ್ಟಿ ಮಡಕೆ ಒಡೆಯುವ ಸ್ಪರ್ಧೆ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
"ನಮ್ಮ ಗಲ್ಲಿಯಲ್ಲಿ ಕಳೆದ 15 ದಿನಗಳಿಂದ ಹಬ್ಬದ ವಾತಾವರಣವಿದೆ. ಸ್ಫರ್ಧೆಯಲ್ಲಿ ಧರ್ಮ, ಜಾತಿ ಭೇದವಿಲ್ಲದೆ ಎಲ್ಲರೂ ಭಾಗಿಯಾಗಿದ್ದಾರೆ. ಇದು ನಮ್ಮ ದೇಶಕ್ಕೆ ಮಾದರಿ" ಎನ್ನುತ್ತಾರೆ ಸ್ಥಳೀಯ ನಿವಾಸಿ, ವಕೀಲರಾದ ಅನಿಸ್ ಬಾಷಾ.
"ಕಳೆದ 15 ದಿನಗಳಿಂದ ಈ ಕಾರ್ಯಕ್ರಮಕ್ಕೆ ತಯಾರಿ ನಡೆಸುತ್ತಿದ್ದೆವು. ಉದ್ಯೋಗಕ್ಕಾಗಿ ಬೇರೆ ಬೇರೆ ಜಿಲ್ಲೆ ರಾಜ್ಯಗಳಿಂದ ಜನರು ಇಲ್ಲಿಗೆ ಬರುತ್ತಾರೆ. ಅವರಿಗೆ ಕುಟುಂಬವನ್ನು ಬಿಟ್ಟು ಬಂದಿದ್ದೇವೆ ಎನ್ನುವ ಕೊರಗು ಕಾಡಬಾರದು ಎನ್ನುವ ದೃಷ್ಟಿಯಿಂದ ಇಂತಹ ಕಾರ್ಯಕ್ರಮ ಆಯೋಜಿಸಲಾಗಿದೆ" ಎಂದು ಸ್ಥಳೀಯರೊಬ್ಬರು ತಿಳಿಸಿದರು.