ದಾವಣಗೆರೆ: ಜಿಲ್ಲೆಯಲ್ಲಿ ಡ್ರಗ್ಸ್ ನಿರ್ಮೂಲನೆಗೆ ಕ್ರಮ ಕೈಗೊಳ್ಳಿ. ಮೆಡಿಕಲ್, ಡೆಂಟಲ್, ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಲು ಹೊರ ರಾಜ್ಯದ ವಿದ್ಯಾರ್ಥಿಗಳು ಬಂದಿದ್ದು, ಒಬ್ಬರೇ ಇರುವುದರಿಂದ ದುರಭ್ಯಾಸಕ್ಕೆ ಒಳಗಾಗುವ ಸಂಭವ ಹೆಚ್ಚಿರುತ್ತದೆ. ಹಾಗಾಗಿ ವಿಶೇಷ ತಂಡ ರಚಿಸಿ ಈ ಜಾಲದ ಆಳಕ್ಕಿಳಿದು ತನಿಖೆ ನಡೆಸುವಂತೆ ಸೂಚನೆ ನೀಡಿದ್ದೇನೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿ, ಬಳಿಕ ಮಾತನಾಡಿದ ಅವರು, ಡ್ರಗ್ ಮಾಫಿಯಾ ಅಪರಾಧ ಪತ್ತೆ ಹಚ್ಚುವಂತೆ ಆದೇಶಿಸಿದ್ದೇನೆ. ಗುಪ್ತಚರ ಪೊಲೀಸ್ ದಳವನ್ನು ಮತ್ತಷ್ಟು ಬಲಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಎಫ್ಎಸ್ಎಲ್ ಲ್ಯಾಬ್ಗಳ ಆಧುನೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಆಧುನಿಕ ಉಪಕರಣಗಳನ್ನು ನೀಡಬೇಕಿದೆ. ಕೆಲವೊಂದು ಪ್ರಕರಣಗಳಲ್ಲಿ ಬೆಂಗಳೂರಿನ ಲ್ಯಾಬ್ಗೆ ಕಳುಹಿಸಿಕೊಡಬೇಕಿದೆ. ಈ ಕಾರಣಕ್ಕೆ ರೇಂಜ್ ವ್ಯಾಪ್ತಿಯಲ್ಲಿ ಉತ್ತಮ ಸೌಲಭ್ಯಗಳನ್ನು ನೀಡಿ ಎಫ್ಎಸ್ಎಲ್ ವರದಿ ಬೇಗ ಸಿಗುವಂತೆ ಕ್ರಮ ಜರುಗಿಸುತ್ತೇವೆ. ಪೊಲೀಸ್ ಠಾಣೆಗಳಲ್ಲಿ ಆಧುನಿಕ ತಂತ್ರಜ್ಞಾನ ಉಪಕರಣಗಳನ್ನು ಹಂತಹಂತವಾಗಿ ನೀಡುತ್ತೇವೆ. "ಫ್ರೆಂಡ್ಲಿ ಪೊಲೀಸ್, ಕ್ರಿಮಿನಲ್ಸ್ ಎನಿಮೀಸ್" ರೀತಿಯಲ್ಲಿ ಕೆಲಸ ಮಾಡುವಂತೆ ಸೂಚಿಸಿದ್ದೇನೆ ಎಂದು ಮಾಹಿತಿ ನೀಡಿದರು.