ದಾವಣಗೆರೆ: ಮನೆಯಲ್ಲಿರುವ ಹಿರಿಯರಲ್ಲಿ ಕೊರೊನಾ ಸೋಂಕಿನ ಲಕ್ಷಣಗಳಿದ್ದರೆ ಕೂಡಲೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಯುವಕರಲ್ಲಿ ಮನವಿ ಮಾಡಿದ್ದಾರೆ.
ಈ ಸಂಬಂಧ ವಿಡಿಯೋ ಬಿಡುಗಡೆ ಮಾಡಿರುವ ಅವರು, 60 ವರ್ಷ ಮೇಲ್ಪಟ್ಟ ಹಿರಿಯರು ಮನೆಯಲ್ಲಿ ಇದ್ದರೆ ಕಾಳಜಿ ವಹಿಸಿ. ರಕ್ತದೊತ್ತಡ, ಹೈಪರ್ ಟೆನ್ಶನ್, ಅಸ್ತಮಾ ಸೇರಿದಂತೆ ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿದ್ದರೆ ಔಷಧ ತಂದುಕೊಡಿ. ಕಾಲಕಾಲಕ್ಕೆ ತಕ್ಕಂತೆ ಔಷಧ, ಮಾತ್ರೆ ತೆಗೆದುಕೊಳ್ಳುವಂತೆ ನೋಡಿಕೊಳ್ಳಿ.
ಕೆಮ್ಮು, ಜ್ವರ, ನೆಗಡಿ ಸೇರಿದಂತೆ ಕೊರೊನಾ ಸೋಂಕಿನ ಲಕ್ಷಣ ಕಂಡುಬಂದ ತಕ್ಷಣ ವೈದ್ಯರ ಬಳಿ ಚಿಕಿತ್ಸೆ ಕೊಡಿಸಿ. ಆಗ ಮಾತ್ರ ಜಿಲ್ಲೆಯಲ್ಲಿ ಕೊರೊನಾದಿಂದ ಸಾವನ್ನಪ್ಪುವವರ ಸಂಖ್ಯೆ ಕಡಿಮೆ ಮಾಡಬಹುದು. ಇದಕ್ಕೆ ಯುವಕರು ಸಹಕರಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ಡಿಸಿ ಹೇಳಿದ್ದಾರೆ.
ಇನ್ನು ಈ ಕುರಿತು ಮಾತನಾಡಿರುವ ಎಸ್ಪಿ ಹನುಮಂತರಾಯ, ನಾನೂ ಕೂಡ ಕೊರೊನಾ ಬಾಧಿತನಾಗಿ ಜಿಲ್ಲಾಸ್ಪತ್ರೆಯಲ್ಲಿ 8 ದಿನಗಳ ಕಾಲ ಚಿಕಿತ್ಸೆ ಪಡೆದು ಗುಣಮುಖನಾದ ಬಳಿಕ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಯಾರೂ ಆತ್ಮಸ್ಥೈರ್ಯ ಹಾಗೂ ಧೈರ್ಯ ಕಳೆದುಕೊಳ್ಳಬೇಡಿ. ಸರ್ಕಾರ ನೀಡಿರುವ ಮಾರ್ಗಸೂಚಿ ಪಾಲಿಸಿ ಎಂದಿದ್ದಾರೆ.
ಕೋವಿಡ್ ಹೊಡೆದೋಡಿಸಲು ಸರ್ಕಾರಿ ಅಧಿಕಾರಿಗಳು, ವೈದ್ಯರು, ನರ್ಸ್, ಕೊರೊನಾ ವಾರಿಯರ್ಸ್ ಹಗಲಿರುಳು ಶ್ರಮಿಸುತ್ತಿದ್ದಾರೆ. ಸೋಂಕು ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ. ದಯವಿಟ್ಟು ನಮಗೆ ಸಹಕಾರ ನೀಡಿ ಎಂದು ಎಸ್ಪಿ ಹನುಮಂತರಾಯ ಮನವಿ ಮಾಡಿದ್ದಾರೆ.