ದಾವಣಗೆರೆ: ಈರುಳ್ಳಿ ದರ ದಿನ ಕಳೆದಂತೆ ಹೆಚ್ಚಾಗುತ್ತಲೇ ಇದೆ. ಕೆಲವೆ ದಿನಗಳಲ್ಲಿ ಪ್ರತಿ ಕೆಜಿಗೆ ನೂರು ರೂಪಾಯಿ ದಾಟಲಿದೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ. ಆದರೆ ಉತ್ತರ ಕರ್ನಾಟಕದಲ್ಲಿ ಜಲಪ್ರಳಯ ಆಗಿರುವ ಕಾರಣದಿಂದ ಆ ಭಾಗದಲ್ಲಿ ಬೆಳೆದಿದ್ದ ಬೆಳೆ ಸಂಪೂರ್ಣ ನೀರುಪಾಲಾಗಿದೆ. ಭಾರೀ ಮಳೆ ಸುರಿದ ಪರಿಣಾಮ ಕಾಲು ಭಾಗದಷ್ಟು ಬೆಳೆ ಬಂದಿಲ್ಲ. ಇದರಿಂದ ದರ ಹೆಚ್ಚಾಗಿದ್ದರೂ, ಬೆಳೆ ಇಲ್ಲದೆ ಈರುಳ್ಳಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಒಂದು ಲಕ್ಷ ರೂಪಾಯಿ ಖರ್ಚು ಮಾಡಿದ್ದರೆ ಕೇವಲ ಹತ್ತರಿಂದ ಹದಿನೈದು ಸಾವಿರ ರೂಪಾಯಿ ಬರುತ್ತಿದೆ. ಅಸಲು ಇರಲಿ, ಜಮೀನಿಗೆ ಹಾಕಿದ ಗೊಬ್ಬರ ಹಾಗೂ ಕೂಲಿ ಕಾರ್ಮಿಕರಿಗೆ ನೀಡಿದ ಹಣವೂ ಸಿಗ್ತಿಲ್ಲ. ಈರುಳ್ಳಿ ದರ ಹೆಚ್ಚಾಗಿದೆ ಎಂದು ಸಂತೋಷ ಪಡುವ ಸ್ಥಿತಿಯಲ್ಲಿ ಬೆಳೆಗಾರರು ಇಲ್ಲ. ಈರುಳ್ಳಿಯನ್ನು ಹೆಚ್ಚಿನ ದಿನ ಸಂಗ್ರಹಿಸಿಡಲು ಸಾಧ್ಯವಿಲ್ಲ. ಕಡಿಮೆ ದರಕ್ಕೆ ರೈತರು ಒಪ್ಪುತ್ತಿಲ್ಲ. ಗ್ರಾಹಕರು ಖರೀದಿಸುವುದು ಕಡಿಮೆ.
ಮಹಾರಾಷ್ಟ್ರದ ನಾಸಿಕ್ ನಿಂದ ಬರುವ ಉಳ್ಳಾಗಡ್ಡಿಗೆ ಭಾರೀ ಬೇಡಿಕೆ ಬಂದಿದೆ. ಉತ್ತಮ ಇಳುವರಿ ಬಂದಿರುವ ಬೆಳೆಗೆ ಪ್ರತಿ ಕೆಜಿಗೆ 70 ರಿಂದ 80 ರೂಪಾಯಿ ಇದೆ. ರಾಜ್ಯದಲ್ಲಿ ಈರುಳ್ಳಿ ಎಲ್ಲಿಂದಲೂ ಬರುತ್ತಿಲ್ಲ. ಇನ್ನು ಬೆಳೆ ಬರಬೇಕಾದರೆ ಮೂರು ತಿಂಗಳು ಬೇಕು. ಅಲ್ಲಿಯವರೆಗೆ ಬೇರೆ ಬೇರೆ ರಾಜ್ಯಗಳಿಂದ ಬರುವ ಈರುಳ್ಳಿಗೆ ಡಿಮ್ಯಾಂಡ್ ಇದೆ. ಅಲ್ಲಿ ಧಾರಣೆ ಹೆಚ್ಚಿಸಿದರೆ ಇಲ್ಲಿಯೂ ಹೆಚ್ಚಾಗುತ್ತದೆ. ಆದ್ರೆ ಅಲ್ಲಿಂದ ಉತ್ಪನ್ನ ಬರುವುದು ಕಡಿಮೆ ಆಗುತ್ತಿದೆ. ದಸರಾ ಹಬ್ಬ ಮುಗಿಯುವಷ್ಟರಲ್ಲಿ ನೂರು ರೂಪಾಯಿ ದಾಟುತ್ತದೆ. ಯಾವುದೇ ಕಾರಣಕ್ಕೂ ಕಡಿಮೆ ಆಗುವ ಸಾಧ್ಯತೆ ಇಲ್ಲವೆಂದು ಈರುಳ್ಳಿ ವರ್ತಕರ ಸಂಘದ ಅಧ್ಯಕ್ಷ ಬಸವಂತಪ್ಪ ಹೇಳಿದರು.
ಮಳೆಯಿಂದಾಗಿ ಬೆಳೆ ನಾಶವಾಗಿದೆ. ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೆಳೆದ ಬೆಳೆ ಹಾಳಾಗಿದೆ. ಮುಂದೇನು ಮಾಡಬೇಕು ಅಂತ ತೋಚುತ್ತಿಲ್ಲ. ಸರ್ಕಾರ ನಮ್ಮ ಸಹಾಯಕ್ಕೆ ಬರಬೇಕು ಎಂದು ಈರುಳ್ಳಿ ಬೆಳೆಗಾರ ಬಸವರಾಜ್ ಮನವಿ ಮಾಡಿದ್ದಾರೆ.