ದಾವಣಗೆರೆ: ದಾವಣಗೆರೆ ವಿದ್ಯಾರ್ಥಿಗಳ ಬಹುವರ್ಷಗಳ ಕನಸು, ಇದೀಗ ಕೇಂದ್ರ ಸರ್ಕಾರ ನನಸು ಮಾಡಿದೆ. ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ ಹಾಗು ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ತಂತ್ರಜ್ಞಾನ ಇಲಾಖೆಯಿಂದ ದಾವಣಗೆರೆಯಲ್ಲಿ ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾದ 63ನೇ ಉಪಕೇಂದ್ರಕ್ಕೆ ರಾಜ್ಯ ಖಾತೆ ಸಚಿವ ರಾಜೀವ್ ಚಂದ್ರಶೇಖರ್ ವರ್ಚುಯಲ್ ಮೂಲಕ ಉದ್ಘಾಟನೆ ಮಾಡಿದರು.
ದಾವಣಗೆರೆ ಈಗಾಗಲೇ ಸಾಕಷ್ಟು ಮುಂದುವರೆದಿರುವ ಪ್ರಮುಖ ನಗರಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ಜಿಲ್ಲೆ. ಇಲ್ಲಿನ ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಕಾಂಕ್ಷಿಗಳಿಗೆ ಉಪಯೋಗ ಆಗಲಿ ಎಂದು ಕೇಂದ್ರ ಸರ್ಕಾರದ ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ತಂತ್ರಜ್ಞಾನ ಇಲಾಖೆಯ ರಾಜ್ಯದ ಐದನೇ ಎಸ್‌ಟಿಪಿಐ ಉಪ ಕೇಂದ್ರವನ್ನು ಆರಂಭಿಸಲಾಯಿತು.
ಇದನ್ನು ರಾಜ್ಯ ಖಾತೆ ಸಚಿವ ರಾಜೀವ್ ಚಂದ್ರಶೇಖರ್ ವರ್ಚುಯಲ್ ಮೂಲಕ ಚಾಲನೆ ನೀಡಿದರು, ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಹಾಗೂ ಸಂಸದ ಜಿಎಂ ಸಿದ್ದೇಶ್ವರ್ ಭಾಗಿಯಾಗಿದ್ದರು. ಸದ್ಯ ದಾವಣಗೆರೆ ನಗರದ ಜೆಹೆಚ್ ಪಟೇಲ್ ಬಡಾವಣೆಯಲ್ಲಿರುವ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಕ್ಯಾಂಪಸ್ನಲ್ಲಿ ತಾತ್ಕಾಲಿಕವಾಗಿ ಎಸ್‌ಟಿಪಿಐ ರಾಜ್ಯದ ಐದನೇ ಉಪಕೇಂದ್ರ ಆರಂಭವಾಗಿದೆ.
ಸ್ವಂತ ಕಟ್ಟಡದಲ್ಲಿ ಕಚೇರಿ ಮಾಡಲು ಈಗಾಗಲೇ ಬಾತಿ ಗ್ರಾಮದ ಬಳಿ ಎರಡು ಎಕರೆ ಜಮೀನು ನಿಗದಿ ಮಾಡಿದ್ದು ಅಲ್ಲಿ ಎಸ್‌ಟಿಪಿಐಯ ಬೃಹತ್ ಕಟ್ಟಡ ನಿರ್ಮಾಣವಾಗಲಿದೆ.
ಈಗಾಗಲೇ ದಾವಣಗೆರೆಯಲ್ಲಿ ಕಾರ್ಯನಿವರ್ಹಿಸಲು ಹತ್ತು ಐಟಿಬಿಟಿ ಕಂಪನಿಗಳು ರಿಜಿಸ್ಟರ್ ಮಾಡಿಕೊಂಡಿವೆ. ಇದಲ್ಲದೇ ದಾವಣಗೆರೆಯಲ್ಲಿ ಮೂರು ಕಂಪನಿಗಳು ತನ್ನ ಕಾರ್ಯಾರಂಭ ಮಾಡಿದ್ದು, ಇದರಿಂದ ಉದ್ಯೋಗಾಕಾಂಕ್ಷಿಗಳಿಗೆ ಇದು ಸಹಕಾರಿಯಾಗಲಿದೆ ಎಂದು ಸಂಸದ ಜಿಎಂ ಸಿದ್ದೇಶ್ವರ್ ಮಾಹಿತಿ ಹಂಚಿಕೊಂಡರು.
ದೇಶದಲ್ಲಿ ಒಟ್ಟು 63 ಎಸ್‌ಟಿಪಿಐ ಕೇಂದ್ರಗಳ ಸಾಲಿಗೆ ದಾವಣಗೆರೆಯ ಉಪ ಕೇಂದ್ರ ಹೊಸದಾಗಿ ಸೇರ್ಪಡೆಯಾಗಿದೆ. ರಾಜ್ಯದಲ್ಲಿ ಈಗಾಗಲೇ ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳಿಯಲ್ಲಿ ತಲಾ ಒಂದೊಂದು ಕೇಂದ್ರಗಳಿವೆ. ಇದೀಗ ದಾವಣಗೆರೆಯಲ್ಲಿ ಎಸ್‌ಟಿಪಿಐಯ ತನ್ನ ಐದನೇ ಉಪ ಕೇಂದ್ರವನ್ನು ಕಾರ್ಯಾರಂಭ ಮಾಡಿರುವುದು ವಿದ್ಯಾರ್ಥಿಗಳ ಸಂತಸಕ್ಕೆ ಕಾರಣವಾಗಿದೆ.
ಇನ್ನು ಈ ಎಸ್‌ಟಿಪಿಐ ಉಪ ಕೇಂದ್ರದತ್ತ ಹಲವು ಸಾಫ್ಟ್ವೇರ್ ಕಂಪನಿಗಳು, ಆ್ಯಪ್ ಮೂಲಕ ಕಾರ್ಯ ನಿರ್ವಹಿಸುವ ಕಂಪನಿಗಳು ಜಿಲ್ಲೆಯತ್ತ ಮುಖ ಮಾಡಿದ್ದರಿಂದ ಜಿಲ್ಲೆಯಲ್ಲಿ ಐಟಿ ಉದ್ಯಮ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಲಿವೆ. ಇನ್ನು ಎಸ್‌ಟಿಪಿಐಯ ಉದಯೋನ್ಮುಖ ಸ್ಟಾರ್ಟ್ ಆಪ್ಗಳಿಗೆ ಮೂಲಸೌಕರ್ಯ, ಸಂಪನ್ಮೂಲಗಳು, ತರಬೇತಿ ಮಾರ್ಗದರ್ಶನ, ತಂತ್ರಜ್ಞಾನ ಬೆಂಬಲ ಮತ್ತು ಧನ ಸಹಾಯವನ್ನು ಒದಗಿಸುವ ಗುರಿಯೊಂದಿಗೆ ಸೆಂಟರ್ ಆಪ್ ಎಕ್ಸಲೆನ್ಸ್ ಸ್ಥಾಪನೆ ಮಾಡಲಾಗಿದೆ.
ಇದನ್ನೂ ಓದಿ: ಟಿಆರ್ಎಸ್ ಶಾಸಕರ ಖರೀದಿ ಆರೋಪ ಪ್ರಕರಣ: ಬಿಎಲ್ ಸಂತೋಷ್‌ಗೆ ಜಾರಿಯಾಗಿದ್ದ ನೋಟಿಸ್‌ಗೆ ಹೈಕೋರ್ಟ್ ತಡೆ