ದಾವಣಗೆರೆ: ಬೆಣ್ಣೆನಗರಿ ದಾವಣಗೆರೆ ಜಿಲ್ಲೆ ಕೊರೊನಾ ಸೋಂಕಿತರ ಹಾಟ್ಸ್ಪಾಟ್ ಆಗುತ್ತಿದ್ದು, ಒಂದೇ ದಿನ ಆರು ಕೊರೊನಾ ಪಾಸಿಟಿವ್ ಪತ್ತೆಯಾಗಿವೆ. ಇದರಿಂದಾಗಿ ಸೋಂಕಿತರ ಸಂಖ್ಯೆ 8ಕ್ಕೇರಿದೆ.
ಬಾಷಾ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ 533 ಸಂಖ್ಯೆಯ ಸ್ಟಾಫ್ ನರ್ಸ್ನ ಪುತ್ರ (16 ವರ್ಷ)ನಲ್ಲಿ ಸೋಂಕು ಇರುವುದು ದೃಢಪಟ್ಟಿದೆ. 556 ಸಂಖ್ಯೆಯ ವೃದ್ಧನ ಪ್ರಾಥಮಿಕ ಸಂಪರ್ಕದಲ್ಲಿದ್ದ ಒಂದು ವರ್ಷದ ಮೊಮ್ಮಗ ಸೇರಿದಂತೆ ಐವರಲ್ಲಿ ಕೊರೊನಾ ಪತ್ತೆಯಾಗಿದೆ. ನರ್ಸ್ನಿಂದ ಮಗನಿಗೆ ಬಂದಿದೆಯೋ ಅಥವಾ ಮಗನಿಂದ ತಾಯಿಗೆ ಬಂದಿದೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಎಸ್ಪಿ ಮತ್ತು ಆರೋಗ್ಯ ಇಲಾಖೆ ಶ್ರಮಿಸುತ್ತಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಮಾಹಿತಿ ನೀಡಿದ್ದಾರೆ.
ಒಂದು ವರ್ಷದ ಮಗುವಿಗೂ ಕೊರೊನಾ ದೃಢ..!
556 ಸಂಖ್ಯೆಯ ಸೋಂಕಿತ ವೃದ್ಧನ ಪ್ರಾಥಮಿಕ ಸಂಪರ್ಕದಲ್ಲಿದ್ದ 51 ವರ್ಷದ ಸೊಸೆ, 24 ವರ್ಷದ ಸೊಸೆ, 18 ವರ್ಷದ ಸೊಸೆ, 24 ವರ್ಷದ ಮಗ ಹಾಗೂ ಒಂದು ವರ್ಷದ ಮೊಮ್ಮಗನಿಗೂ ಸೋಂಕು ತಗುಲಿರುವುದು ಸಾಬೀತಾಗಿದೆ. ಹೇಗೆ ಸೋಂಕು ಬಂತು ಎಂಬುದು ಖಚಿತಪಟ್ಟಿಲ್ಲ. ಈ ಬಗ್ಗೆ ಪತ್ತೆ ಕಾರ್ಯ ಬಿರುಸು ಪಡೆದಿದೆ ಎಂದು ಜಿಲ್ಲಾಧಿಕಾರಿ ಬೀಳಗಿ ತಿಳಿಸಿದರು.
ಇಂದು 82 ಜನರ ಸ್ಯಾಂಪಲ್ ಕಳುಹಿಸಲಾಗಿದೆ. 533, 556 ಸಂಖ್ಯೆಯವರು ವಾಸ ಮಾಡುತ್ತಿದ್ದ ಅಕ್ಕಪಕ್ಕದವರ ಮನೆಯವರ ಸ್ಯಾಂಪಲ್ ಅನ್ನು ಸಂಗ್ರಹಿಸಲಾಗುವುದು. ಇಬ್ಬರು ಪಾಸಿಟಿವ್ ಪ್ರಕರಣಗಳ ಮೂಲ ಎಲ್ಲಿ ಎನ್ನುವುದು ಗೊತ್ತಾಗಿಲ್ಲ. ಹಾಗಾಗಿ ಬಾಷಾ ನಗರ ಹಾಗೂ ಜಾಲಿ ನಗರದಲ್ಲಿ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಇನ್ನು 69 ವರ್ಷದ ವೃದ್ಧನಿಗೆ ಚಿಕಿತ್ಸೆ ಮುಂದುವರಿದಿದೆ. ತಜ್ಞ ವೈದ್ಯರ ಜೊತೆ ಸಭೆ ನಡೆಸಲಾಗಿದೆ. ಬೆಂಗಳೂರಿನ ತಜ್ಞ ವೈದ್ಯರ ಸಂಪರ್ಕದಲ್ಲಿದ್ದು ಚಿಕಿತ್ಸೆ ಮುಂದುವರಿಸಿದ್ದೇವೆ. ಚಿಕಿತ್ಸೆಗೆ ವೃದ್ಧ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಸದ್ಯಕ್ಕೆ ಆತಂಕಪಡುವ ಅಗತ್ಯ ಇಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಸ್ಪಷ್ಟನೆ ನೀಡಿದರು.