ದಾವಣಗೆರೆ: ರಥಯಾತ್ರೆ ಘರ್ಷಣೆಯಲ್ಲಿ ಮಡಿದವರ ಸ್ಮರಣಾರ್ಥ 15 ಕೆಜಿ ತೂಕದ ಬೆಳ್ಳಿ ಇಟ್ಟಿಗೆ ತಯಾರಾಗಿದ್ದು, ಅಯೋಧ್ಯೆಯ ರಾಮ ಮಂದಿರಕ್ಕೆ ತಲುಪಲು ಸಜ್ಜಾಗಿದೆ.
ರಾಮಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ಲಾಲ್ ಕೃಷ್ಣ ಅಡ್ವಾಣಿ ನೇತೃತ್ವದಲ್ಲಿ ರಥಯಾತ್ರೆ ಮೂಲಕ ದಾವಣಗೆರೆಗೆ ಆಗಮಿಸಿದ್ದ ವೇಳೆ ನಡೆದಿದ್ದ ಗಲಾಟೆಯಲ್ಲಿ ಮೃತಪಟ್ಟವರ ಸವಿನೆನಪಿಗಾಗಿ ಈ ಇಟ್ಟಿಗೆ ತಯಾರಿಸಲಾಗಿದೆ.
ಸುಮಾರು 11 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ಇಟ್ಟಿಗೆ ಇದಾಗಿದೆ. ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮತ್ತು ಬಿಜೆಪಿ ಮುಖಂಡರು ರಾಮ ಮಂದಿರ ಶಿಲನ್ಯಾಸ ಆದ ಬಳಿಕ ಇದರ ನಿರ್ಮಾಣ ಕಾರ್ಯ ಪ್ರಾರಂಭಿಸಿದ್ದು, ಇದೀಗ ಅದು ಪೂರ್ಣಗೊಂಡಿದೆ.
ಅಕ್ಟೋಬರ್ 6 ರಂದು ಬೆಳಗ್ಗೆ ಓಂಕಾರ ಶಿವಾಚಾರ್ಯ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ರಾಮರಥದಲ್ಲಿ ಬೆಳ್ಳಿ ಇಟ್ಟಿಗೆ ಇಟ್ಟು ಪುಷ್ಪಾರ್ಚನೆ ಮಾಡಿದ ಬಳಿಕ ನಗರದ ಮಟ್ಟಿಕಲ್ಲು ಮುಖ್ಯರಸ್ತೆ, ಆರ್ಎಂಸಿ ರಸ್ತೆ, ಆಂಜನೇಯ ಗಣೇಶ ದೇವಸ್ಥಾನ, ಚೌಕಿಪೇಟೆ, ದೊಡ್ಡಪೇಟೆ, ದುರ್ಗಾಂಬಿಕಾ ದೇವಸ್ಥಾನ, ಹೊಂಡ ಸರ್ಕಲ್, ಸ್ಟಾರ್ ನಾಗಪ್ಪ ಅವರ ಮನೆ ಮುಂಭಾಗದಿಂದ ಕಾಯಿಪೇಟೆ ಬಸವೇಶ್ವರ ದೇವಸ್ಥಾನದ ಮೂಲಕ ಅಕ್ಕಮಹಾದೇವಿ ರಸ್ತೆ ಮಾರ್ಗದಲ್ಲಿ ಮೆರವಣಿಗೆ ನಡೆಯಲಿದೆ. ಬಳಿಕ ಪಿ ಜೆ ಬಡಾವಣೆಯಲ್ಲಿರುವ ರಾಮಮಂದಿರದಲ್ಲಿರಿಸಿ ಪೂಜೆ ಸಲ್ಲಿಸಲಾಗುವುದು. ಸಭಾ ಕಾರ್ಯಕ್ರಮದಲ್ಲಿ ಸಂಸದ ಜಿಎಂ ಸಿದ್ದೇಶ್ವರ್, ಶಾಸಕ ಎಸ್. ಎ. ರವೀಂದ್ರನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ತಿಳಿಸಿದ್ದಾರೆ.
1990 ರ ಅಕ್ಟೋಬರ್ 6 ರಂದು ದಾವಣಗೆರೆಯಲ್ಲಿ ರಥಯಾತ್ರೆ ನಡೆದಿತ್ತು. ಈ ವೇಳೆ ಗೋಲಿಬಾರ್ ನಲ್ಲಿ 8 ಜನ ಮೃತಪಟ್ಟಿದ್ದರು. ಈ ಸ್ಮರಣಾರ್ಥ 15 ಕೆಜಿ ಬೆಳ್ಳಿ ಇಟ್ಟಿಗೆ ಮಾಡಿಸಲಾಗಿದೆ. ರಥಯಾತ್ರೆಯ ವೇಳೆ ಹುತಾತ್ಮರಾದ 8 ಜನರ ಹೆಸರನ್ನು ಅದರ ಮೇಲೆ ಕೆತ್ತಿಸಲಾಗಿದೆ. ಜೊತೆಗೆ ಇಟ್ಟಿಗೆ ಮೇಲೆ ಜೈ ಶ್ರೀರಾಮ ಅಂತ ಬರೆಸಲಾಗಿದ್ದು, ಕಮಲದ ಚಿತ್ರವು ಇದೆ. ಬೆಳ್ಳಿ ಇಟ್ಟಿಗೆಯನ್ನು ಯಾವಾಗ ರಾಮ ಮಂದಿರಕ್ಕೆ ಕಳುಹಿಸಲಾಗುವುದು ಎಂಬುದರ ಬಗ್ಗೆ ಇನ್ನು ನಿರ್ಧಾರ ತೆಗೆದುಕೊಂಡಿಲ್ಲ. ಈ ಬಗ್ಗೆ ಚರ್ಚೆ ನಡೆಸಿ ಆದಷ್ಟು ಬೇಗ ಕಳುಹಿಸಿಕೊಡಲಾಗುವುದು ಎಂದು ಹೇಳಿದ್ದಾರೆ.