ದಾವಣಗೆರೆ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಗೆ ದಾವಣಗೆರೆ ಉಸ್ತುವಾರಿ ಸಚಿವ ಹಾಗೂ ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಉಚಿತ ಬಸ್ ಟಿಕೆಟ್ ನೀಡುವ ಚಾಲನೆ ನೀಡಿದರು. ನಂತರ ಸಚಿವರು ಸ್ವಂತ ತಾವೇ ಬಸ್ ಚಲಾಯಿಸಿ ಎಲ್ಲರ ಗಮನ ಸೆಳೆದರು. ಶಕ್ತಿ ಯೋಜನೆ ಜಾರಿಯಿಂದ ಮಹಿಳೆಯರು ಸಂತಸ ವ್ಯಕ್ತಪಡಿಸಿದರು. ಕೆಲ ಮಹಿಳೆಯರು ನಗರ ಸಾರಿಗೆ ಬಸ್ನಲ್ಲಿ ಪ್ರಯಾಣ ಮಾಡಿದರು. ಬಳಿಕ ತಮಗೆ ನೀಡಿದ ಟಿಕೆಟ್ ಪ್ರದರ್ಶಿಸಿ ಹರ್ಷ ವ್ಯಕ್ತಪಡಿಸಿದರು.
ಶಕ್ತಿ ಯೋಜನೆ ಜಾರಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ಇಂದು ಹೆಣ್ಣು ಮಕ್ಕಳಿಗೆ ಉಚಿತ ಪ್ರಯಾಣ ಯೋಜನೆಯನ್ನು ಕರ್ನಾಟಕದ ಕಾಂಗ್ರೆಸ್ ಪಕ್ಷದ ಸರ್ಕಾರ ಜಾರಿಗೆ ತಂದಿದೆ. ಯಾಕೆ ಇವರು ಕಂಡೀಷನ್ ಹಾಕಿದ್ದಾರೆಂದು ನನಗೆ ಅರ್ಥ ಆಗುತ್ತಿಲ್ಲ, ಅ ಚೀಟಿ ಬೇಕು ಈ ಚೀಟಿ ಎನ್ನುತ್ತಿದ್ದಾರೆ. ಹೆಣ್ಣು ಮಕ್ಕಳು ಅಂದ್ರೆ ಹೆಣ್ಣು ಮಕ್ಕಳು, ಗಂಡು ಮಕ್ಕಳು ಅಂದ್ರೆ ಗಂಡು ಮಕ್ಕಳು. ಮತ್ಯಾಕೆ ಅ ಚೀಟಿ ತರ್ರಿ, ಈ ಚೀಟಿ ತರ್ರಿ ಎನ್ನುವುದು. ಗ್ಯಾರಂಟಿಗಳಿಗೆ ಸರ್ಕಾರ ಹೆಚ್ಚು ಕಂಡೀಷನ್ಗಳನ್ನು ಹಾಕುವುದು ಸರಿಯಲ್ಲ ಎಂಬುದು ನನ್ನ ಅಭಿಪ್ರಾಯ ಎಂದರು.
ಇದನ್ನು ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡುತ್ತೇನೆ, ಈ ಹಿಂದೆ ಹೆಣ್ಣು ಮಕ್ಕಳಿಗೆ ರಿಸರ್ವೇಶನ್ ತಂದಿದ್ದು ಕಾಂಗ್ರೆಸ್ ಸರ್ಕಾರ ಎನ್ನುವುದನ್ನು ಯಾರು ಮರೆಯಬಾರದು. ಹಿಂದೆ ಬಿಜೆಪಿ ಸರ್ಕಾರ ಮಾಡಿರುವ ಅನ್ಯಾಯಗಳಿಂದ ಕಾಂಗ್ರೆಸ್ ಏನು ಒಳ್ಳೆಯದು ಮಾಡಿದೆ ಅವೆಲ್ಲವು ಮರೆತು ಹೋಗಿವೆ. ಜಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ನುಡಿದಂತೆ ನಡೆಯು ಸರ್ಕಾರ ಕಾಂಗ್ರೆಸ್ ಸರ್ಕಾರ ಎಂದು ಹೇಳಿದರು.
ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಮಾತನಾಡಿ, ಆಗಸ್ಟ್ 15 ರೊಳಗೆ ಐದು ಗ್ಯಾರಂಟಿ ಯೋಜನೆಗಳನ್ನು ಪೂರೈಸುತ್ತೇವೆ. ಐದು ಗ್ಯಾರಂಟಿ ಯೋಜನೆಗಳನ್ನು ನೂರಕ್ಕೆ ನೂರು ಜಾರಿಗೆ ತರುತ್ತೇವೆ. ಮಹಿಳೆಯರು ಶಕ್ತಿ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು, ವಿರೋಧ ಪಕ್ಷದವರು ಸಾಕಷ್ಟು ತೀಟೆ ಮಾಡಬಹುದು. ಜುಲೈ 1 ರಿಂದ 10 ಕೆಜಿ ಅಕ್ಕಿಯನ್ನು ಕೊಡಲಾಗುವುದು, ನಮ್ಮ ಮುಖ್ಯಮಂತ್ರಿಗಳ ಆಡಳಿತ ಅನುಭವದ ಆಧಾರದ ಮೇಲೆ 2 ಸಾವಿರ ಗೃಹಲಕ್ಷ್ಮೀ ನೀಡುತ್ತಿದ್ದೇವೆ, ದೇಶದಲ್ಲಿ ನರೇಂದ್ರ ಮೋದಿ ಸರ್ಕಾರ ಬಂದಾಗಿನಿಂದ ನಿರುದ್ಯೋಗ ಜಾಸ್ತಿ ಆಗಿದೆ ಎಂದರು.
ನಮ್ಮ ಯುವಕರು ಬೀದಿಗೆ ಬಂದಿದ್ದಾರೆ, ನಮ್ಮ ರಾಜ್ಯದಿಂದ ನಿರುದ್ಯೋಗ ಭತ್ಯೆ ದೇಶಕ್ಕೆ ಮಾದರಿಯಾಗುತ್ತದೆ. ನಮ್ಮ ದೇಶ ಹಾಗೂ ರಾಜ್ಯದಲ್ಲಿ 98% ಜನರು ನೂರು ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಸುತ್ತಾರೆ. ನಮ್ಮ ಜಿಲ್ಲೆಯಲ್ಲಿ 11 ಇಂದಿರಾ ಕ್ಯಾಂಟಿನ್ ಗಳಿವೆ, ಅವುಗಳನ್ನು ಒಳ್ಳೆಯ ರೀತಿಯಲ್ಲಿ ಆರಂಭಿಸಬೇಕು ಎಂದರು. ಮಾಯಕೊಂಡ ಶಾಸಕ ಕೆ ಎಸ್ ಬಸವಂತಪ್ಪ ಮಾತನಾಡಿ, ನೀವು ಫ್ರಿ ಬಸ್ ಪ್ರಯಾಣ ಎಂದು ವಾರಗಟ್ಟಲೇ ಪ್ರವಾಸಕ್ಕೆ ಹೋದರೆ ಗಂಡನಿಗೆ ಕಷ್ಟ ಆಗುತ್ತದೆ. ಅವಶ್ಯಕತೆ ಇದ್ದಷ್ಟು ಮಾತ್ರ ಉಚಿತ ಬಸ್ ಪ್ರಯಾಣ ಮಾಡಿ. ಸರ್ಕಾರದ ಉಚಿತ ಪಾಸ್ನ್ನು ದುರ್ಬಳಕೆ ಮಾಡಿಕೊಳ್ಳಬೇಡಿ. ಆಸ್ಪತ್ರೆ, ಸಂಬಂಧಿಕರ ಮನೆ, ದೇವಸ್ಥಾನ ಹೀಗೆ ಒಳ್ಳೆಯ ಕಾರ್ಯಕ್ಕೆ ಬಳಸಿ ಎಂದು ಮಹಿಳೆಯರಲ್ಲಿ ಮನವಿ ಮಾಡಿದರು.
ಇದನ್ನೂ ಓದಿ: ಶಕ್ತಿ ಯೋಜನೆ ಅನುಷ್ಠಾನದಿಂದ ಸಾರಿಗೆ ಇಲಾಖೆಗೆ ನಷ್ಟ ಆಗುವುದಿಲ್ಲ: ಸಚಿವ ಶರಣಪ್ರಕಾಶ್ ಪಾಟೀಲ್