ದಾವಣಗೆರೆ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣ ಸಂಬಂಧ ಆರೋಪಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಇಲ್ಲಿನ ಪೋಕ್ಸೊ ನ್ಯಾಯಾಲಯ ವಜಾಗೊಳಿಸಿತು. ಜೊತೆಗೆ, ಸಂತ್ರಸ್ತ ಬಾಲಕಿಯ ಚಿಕಿತ್ಸೆಗೆ 1 ಲಕ್ಷ ರೂಪಾಯಿ ತಾತ್ಕಾಲಿಕ ಪರಿಹಾರ ಘೋಷಿಸಿದೆ.
ದಾವಣಗೆರೆ ತಾಲೂಕಿನ ಸರ್ಕಾರಿ ಶಾಲಾ ಶಿಕ್ಷಕನೋರ್ವ ಅದೇ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನು. ಸಂತ್ರಸ್ತೆಯ ತಾಯಿ ದಾವಣಗೆರೆ ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಕ್ಟೋಬರ್ 31ರಂದು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನದಲ್ಲಿರಿಸಿದ್ದರು. ಬಳಿಕ ಆರೋಪಿ ಪರ ವಕೀಲರು ಜಾಮೀನಿಗಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ವಾದ, ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರು ಅರ್ಜಿ ವಜಾಗೊಳಿಸಿದ್ದಾರೆ.
ಸಂತ್ರಸ್ತೆಯ ತಾಯಿ ಬಡವರಾಗಿದ್ದು, ಮಕ್ಕಳನ್ನು ಕಷ್ಟಪಟ್ಟು ಸಾಕಿ ಸಲಹಿದ್ದಾರೆ. ಈ ಘಟನೆಯಿಂದ ಬಾಲಕಿಯ ಆರೋಗ್ಯ ಹದಗೆಟ್ಟಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಚಿಕಿತ್ಸೆಗೆ ನೆರವು ನೀಡಲು ಸಂತ್ರಸ್ತೆ ಪರ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಗಳನ್ನು ಪರಿಶೀಲಿಸಿದ ನ್ಯಾಯಾಧೀಶರು, ಬಾಲಕಿಯ ಚಿಕಿತ್ಸಾ ವೆಚ್ಚಕ್ಕೆ ತಾತ್ಕಾಲಿಕ ಒಂದು ಲಕ್ಷ ಪರಿಹಾರ ನೀಡಬೇಕೆಂದು ಸೂಚಿಸಿದರು. ಸಂತ್ರಸ್ತೆ ಪರವಾಗಿ ಸರ್ಕಾರಿ ಅಭಿಯೋಜಕ (ಪಿಪಿ) ಸುನಂದ ಮಡಿವಾಳ ಮತ್ತು ಹಿರಿಯ ವಕೀಲರಾದ ಅನೀಸ್ ಪಾಷಾ ವಾದ ಮಂಡಿಸಿದರು.
ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ: ಕೃತ್ಯಕ್ಕೆ ಸಹಕರಿಸಿದ ವ್ಯಕ್ತಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ